ಚೆನ್ನೈ: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಸಂಬಂಧಿಸಿದ ಗರಿಷ್ಠ ವಯೋಮಿತಿಯನ್ನ 5 ವರ್ಷಗಳ ಕಾಲ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಸೌಲಭ್ಯವು ಇಂದಿನಿಂದ 5 ವರ್ಷಗಳವರೆಗೆ ಜಾರಿಯಲ್ಲಿರಲಿದೆ. ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ವಿಜಯ್ ಅವರು 5 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆಗೆ ಅನುಮೋದನೆ ನೀಡಿದ್ದಾರೆ.
ಈಗಾಗಲೇ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಅನ್ವಯವಾಗುತ್ತಿರುವ ವಯೋಮಿತಿ ಸಡಿಲಿಕೆಗಳ ಜೊತೆಗೆ ಈ ಹೆಚ್ಚುವರಿ ಐದು ವರ್ಷಗಳ ವಿನಾಯಿತಿಯೂ ಅನ್ವಯವಾಗಲಿದೆ. ಅಂದರೆ, ಪ್ರಸ್ತುತ ಜಾರಿಯಲ್ಲಿರುವ ವಯೋಮಿತಿ ಸಡಿಲಿಕೆಗಳನ್ನ ರದ್ದುಗೊಳಿಸದೇ, ಅದರ ಜೊತೆಗೆ ಹೊಸದಾಗಿ 5 ವರ್ಷಗಳ ವಿನಾಯಿತಿ ನೀಡಲಾಗಿದೆ.
ಸರ್ಕಾರಿ ಹುದ್ದೆಗಳ ನೇರ ನೇಮಕಾತಿಗೆ ಪ್ರಸ್ತುತ ಜಾರಿಯಲ್ಲಿರುವ ಗರಿಷ್ಠ ವಯೋಮಿತಿಯನ್ನ ತಲುಪುತ್ತಿರುವ ಅಭ್ಯರ್ಥಿಗಳಿಗೆ ಈ ನಿರ್ಧಾರದಿಂದ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ಮೀಸಲಾತಿ ಅಥವಾ ಇತರ ನೇಮಕಾತಿ ನಿಯಮಗಳ ಅಡಿಯಲ್ಲಿ ವಯೋಮಿತಿ ಸಡಿಲಿಕೆ ಪಡೆಯುತ್ತಿರುವ ಅಭ್ಯರ್ಥಿಗಳಿಗೂ ಹೆಚ್ಚುವರಿ 5 ವರ್ಷಗಳ ವಿನಾಯಿತಿ ಅನ್ವಯವಾಗಲಿದೆ.
ಈ ಆದೇಶ ಅಕ್ಟೋಬರ್ 30, 2026 ರಿಂದ ಮುಂದಿನ 5 ವರ್ಷಗಳವರೆಗೆ ಈ ನಿಯಮ ಅನ್ವಯಿಸುತ್ತದೆ. ಗ್ರೂಪ್-1 (Group-I) ಪರೀಕ್ಷೆಗಳಿಗೆ ಸಾಮಾನ್ಯ ವರ್ಗದ (General Category) ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32 ರಿಂದ 37 ವರ್ಷಕ್ಕೆ ಏರಿಕೆಯಾಗಿದೆ. ಮೀಸಲು ವರ್ಗದ (Reserved Category) ಅಭ್ಯರ್ಥಿಗಳ ವಯೋಮಿತಿ 37 ರಿಂದ 42 ವರ್ಷಕ್ಕೆ ಏರಿಕೆಯಾಗಿದೆ.
ವಿಶೇಷಚೇತನ (ಮೀಸಲಾತಿ ವರ್ಗ) ಅಭ್ಯರ್ಥಿಗಳಿಗೆ 47 ವರ್ಷ ಇದೆ. ಈ ವಯೋಮಿತಿ ಸಡಿಲಿಕೆಯ ನಂತರ, ಈ ಮಿತಿಗಳು ಕ್ರಮವಾಗಿ 47 ಮತ್ತು 52 ವರ್ಷಕ್ಕೆ ಹೆಚ್ಚಾಗಲಿದೆ ಎಂದು ಪ್ರಕಟಣೆ ತಿಳಿಸಿದೆ
ಗ್ರೂಪ್-2 ಮತ್ತು ಗ್ರೂಪ್-2ಎ (Group-II & IIA) ಪರೀಕ್ಷೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ರಿಂದ 35 ವರ್ಷಕ್ಕೆ ಏರಿಕೆಯಾಗಿದೆ. ವಿಶೇಷಚೇತನ (ಸಾಮಾನ್ಯ ವರ್ಗ) ಅಭ್ಯರ್ಥಿಗಳಿಗೆ 45 ವರ್ಷಕ್ಕೆ ಹೆಚ್ಚಾಗಲಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಈಗಾಗಲೇ ಚಾಲ್ತಿಯಲ್ಲಿರುವ ವಯೋಮಿತಿ ಸಡಿಲಿಕೆ ನಿಯಮಗಳ ಜೊತೆಗೆ ಈ ಹೆಚ್ಚುವರಿ 5 ವರ್ಷಗಳ ವಿನಾಯಿತಿ ಲಭ್ಯವಿರಲಿದೆ.

