ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಉದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ಐಟಿ ದಿಗ್ಗಜ ಕಾಂಗ್ನಿಜೆಂಟ್, OpenAI ಜೊತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಇದರ ಭಾಗವಾಗಿ 25,000ಕ್ಕೂ ಹೆಚ್ಚು ತಜ್ಞರನ್ನು ಒಳಗೊಂಡ ವಿಶೇಷ ವಿಭಾಗವನ್ನು ಆರಂಭಿಸಿದ್ದು, ChatGPT ಮತ್ತು Codex ತಂತ್ರಜ್ಞಾನಗಳ ಮೂಲಕ ಸಾಫ್ಟ್‌ವೇರ್ ಅಭಿವೃದ್ಧಿ, ಅಪ್ಲಿಕೇಶನ್ ಆಧುನೀಕರಣ ಹಾಗೂ ಗ್ರಾಹಕ ಸೇವೆಯಲ್ಲಿ ಹೊಸ ಬದಲಾವಣೆ ತರಲು ಸಜ್ಜಾಗಿದೆ. ಈ ಹೊಸ AI ಕಾರ್ಯತಂತ್ರದಿಂದ ಐಟಿ ಉದ್ಯೋಗ ಕ್ಷೇತ್ರ ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಏಕೆ ಈ ಹೊಸ ವಿಭಾಗ?
ಇಂದಿನ ದಿನಗಳಲ್ಲಿ ಬಹುತೇಕ ಕಂಪನಿಗಳಿಗೆ ಎಐ ತಂತ್ರಜ್ಞಾನ ಲಭ್ಯವಿದ್ದರೂ, ತಮ್ಮ ದೈನಂದಿನ ವ್ಯವಹಾರಗಳಿಗೆ, ಸಾಫ್ಟ್‌ವೇರ್ ರಚನೆಗೆ ಹಾಗೂ ಗ್ರಾಹಕ ಸೇವೆಗೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿದಿರುವ ನುರಿತ ತಜ್ಞರ ಕೊರತೆ ಕಾಡುತ್ತಿದೆ. ಈ ಕೊರತೆಯನ್ನು ನೀಗಿಸಲು ಮತ್ತು ಓಪನ್ ಎಐನ ಚಾಟ್‌ಜಿಪಿಟಿ ಹಾಗೂ ಕೋಡೆಕ್ಸ್ ತಂತ್ರಜ್ಞಾನಗಳನ್ನು ಗ್ರಾಹಕರಿಗೆ ಒದಗಿಸಲು ಕಾಂಗ್ನಿಜೆಂಟ್ ಈ ಬೃಹತ್ ಪಡೆಯನ್ನು ಸಜ್ಜುಗೊಳಿಸಿದೆ.
ಮೊದಲು ಸ್ವಂತ ಬಳಕೆ, ಆಮೇಲೆ ಗ್ರಾಹಕರಿಗೆ ಸೇವೆ
ಕಾಂಗ್ನಿಜೆಂಟ್ ಯಾವುದೇ ಹೊಸ ತಂತ್ರಜ್ಞಾನವನ್ನು ನೇರವಾಗಿ ಗ್ರಾಹಕರಿಗೆ ನೀಡುವ ಮುನ್ನ ಅದನ್ನು ಮೊದಲು ತನ್ನಲ್ಲೇ ಅಳವಡಿಸಿ ಪರೀಕ್ಷಿಸಿಕೊಳ್ಳುತ್ತದೆ. ಸದ್ಯ ತನ್ನ ಸೇಲ್ಸ್ ಮತ್ತು ಗ್ರಾಹಕ ಸೇವಾ ವಿಭಾಗದಲ್ಲಿ ಓಪನ್ ಎಐ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಇದೇ ಯಶಸ್ವಿ ಮಾದರಿಯನ್ನು ಈಗ ತನ್ನ ಜಾಗತಿಕ ಗ್ರಾಹಕರಿಗೆ ಒದಗಿಸಲು ಮುಂದಾಗಿದೆ.
ಇದಕ್ಕಾಗಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಭಾರೀ ತರಬೇತಿ ನೀಡುತ್ತಿದ್ದು, ಈಗಾಗಲೇ 21,000ಕ್ಕೂ ಹೆಚ್ಚು ಉದ್ಯೋಗಿಗಳು 40,000ಕ್ಕೂ ಹೆಚ್ಚು ಓಪನ್ ಎಐ ಬ್ಯಾಡ್ಜ್‌ಗಳನ್ನು (ತರಬೇತಿ ಪ್ರಮಾಣಪತ್ರ) ಪಡೆದುಕೊಂಡಿದ್ದಾರೆ.
ಈ ಹೊಸ 25 ಸಾವಿರ ಉದ್ಯೋಗಿಗಳ ತಂಡವು ಆರಂಭದಲ್ಲಿ 3 ಪ್ರಮುಖ ಕ್ಷೇತ್ರಗಳತ್ತ ಗಮನಹರಿಸಲಿದೆ.
ಸಾಫ್ಟ್‌ವೇರ್ ಎಂಜಿನಿಯರಿಂಗ್: ಓಪನ್ ಎಐನ ಕೋಡೆಕ್ಸ್ ತಂತ್ರಜ್ಞಾನ ಬಳಸಿ ಎಂಜಿನಿಯರ್‌ಗಳಿಗೆ ಹೊಸ ಕೋಡ್ ಬರೆಯಲು, ಟೆಸ್ಟ್ ಮಾಡಲು ಸುಲಭವಾಗುವಂತೆ ನೆರವಾಗುವುದು.
ಅಪ್ಲಿಕೇಶನ್ ಆಧುನೀಕರಣ: ಹಳೆಯ ಮಾದರಿಯ ಕೋಡ್‌ಗಳನ್ನು ಬದಲಾಯಿಸಿ, ಅತ್ಯಾಧುನಿಕ ಕ್ಲೌಡ್ ತಂತ್ರಜ್ಞಾನಕ್ಕೆ ಉನ್ನತೀಕರಿಸುವುದು.
ಗ್ರಾಹಕ ಸೇವೆ: ಸೇಲ್ಸ್, ಸರ್ವೀಸ್ ಮತ್ತು ಸಪೋರ್ಟ್ ವಿಭಾಗಗಳಲ್ಲಿ ಓಪನ್ ಎಐ ತಂತ್ರಜ್ಞಾನವನ್ನು ಅಳವಡಿಸಿ ಕೆಲಸದ ವೇಗವನ್ನು ಹೆಚ್ಚಿಸುವುದು.
ಎಐನಿಂದ ಕೆಲಸದ ವೈಖರಿಯಲ್ಲಿ ಬದಲಾವಣೆ
ಈ ಹೊಸ ಹೆಜ್ಜೆಯ ಬಗ್ಗೆ ವಿವರ ಹಂಚಿಕೊಂಡಿರುವ ಕಾಂಗ್ನಿಜೆಂಟ್ ಸಿಇಒ ರವಿಕುಮಾರ್ ಎಸ್., “ಕಳೆದ 50 ವರ್ಷಗಳಲ್ಲಿ ತಂತ್ರಜ್ಞಾನ ಹಲವು ಬದಲಾವಣೆಗಳನ್ನು ಕಂಡಿದೆ. ಇದೀಗ ಓಪನ್ ಎಐ ತರುತ್ತಿರುವ ಮಹತ್ತರ ಬದಲಾವಣೆಗಳನ್ನು ನಮ್ಮ ಗ್ರಾಹಕರಿಗೆ ತಲುಪಿಸಲು ನಾವು 25 ಸಾವಿರ ಉದ್ಯೋಗಿಗಳನ್ನು ಸಜ್ಜುಗೊಳಿಸಿದ್ದೇವೆ. ಮೊದಲು ನಮ್ಮ ಕಂಪನಿಯಲ್ಲೇ ಈ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಇದು ನಮ್ಮ ಕೆಲಸದ ವೈಖರಿಯನ್ನು ಬದಲಾಯಿಸುತ್ತಿದೆ,” ಎಂದು ಸಂತಸ ಹಂಚಿಕೊಂಡರು.
ಓಪನ್ ಎಐ ಸಂಸ್ಥೆಯ ಸಿಆರ್‌ಒ ಡಾಲಿ ರಾಜಿಕ್ ಕೂಡ ಕಾಂಗ್ನಿಜೆಂಟ್ ನಡೆಯನ್ನು ಶ್ಲಾಘಿಸಿದ್ದು, “ಎಐ ತಂತ್ರಜ್ಞಾನವು ಕೇವಲ ತಂತ್ರಜ್ಞಾನವಾಗಿ ಉಳಿಯದೆ, ವಾಣಿಜ್ಯ ಕ್ಷೇತ್ರಕ್ಕೆ ಲಾಭದಾಯಕವಾಗಿ ಬದಲಾಗಲು ಕಾಂಗ್ನಿಜೆಂಟ್ ನೆರವಾಗುತ್ತಿದೆ,” ಎಂದಿದ್ದಾರೆ.
ಈಗಾಗಲೇ ಶುರುವಾಗಿದೆ ಮ್ಯಾಜಿಕ್
ಕಾಂಗ್ನಿಜೆಂಟ್ ಈಗಾಗಲೇ ಜಾಗತಿಕ ಬಯೋ-ಫಾರ್ಮಾ ಕಂಪನಿಯೊಂದಕ್ಕೆ ಎಐ ಅಸಿಸ್ಟೆಂಟ್ ರೂಪಿಸಿಕೊಟ್ಟಿದೆ. ಅದು ಹುಡುಕಾಟ, ಭಾಷಾಂತರ, ಕಂಟೆಂಟ್ ರಚನೆ ಸೇರಿದಂತೆ ಇದುವರೆಗೆ 50 ಲಕ್ಷಕ್ಕೂ ಹೆಚ್ಚು ಸಂವಹನಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಕೆಲಸದ ಸಮಯವನ್ನು ಬರೋಬ್ಬರಿ ಶೇ. 60ರಷ್ಟು ಕಡಿಮೆ ಮಾಡಿದೆ.

