ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಂಗ್ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಐಐಟಿ (IIT) ಅಥವಾ ಬಿಟ್ಸ್ ಪಿಲಾನಿಯಂತಹ ಪ್ರತಿಷ್ಠಿತ ಕಾಲೇಜುಗಳು. ಅಲ್ಲಿ ಓದಿದರೆ ಮಾತ್ರ ಕೋಟಿ ಕೋಟಿ ಸಂಬಳ ಸಿಗುತ್ತೆ ಎಂಬುದು ಬಹುತೇಕರ ನಂಬಿಕೆ. ಆದರೆ, ಟಯರ್-3 (Tier-3) ಕಾಲೇಜಿನ ಸಾಮಾನ್ಯ ಯುವಕನೊಬ್ಬ ಈ ಎಲ್ಲಾ ಮಿಥ್ಯೆಗಳನ್ನು ಬದಿಗಿಟ್ಟು ಹೊಸ ಇತಿಹಾಸ ಬರೆದಿದ್ದಾನೆ.
ರೆಡ್ಡಿಟ್‌ನಲ್ಲಿ ವೈರಲ್ ಆದ ‘ಸಕ್ಸಸ್ ಸ್ಟೋರಿ’!
‘ಡೆವಲಪರ್ಸ್ ಇಂಡಿಯಾ’ (Developers India) ಎಂಬ ರೆಡ್ಡಿಟ್ ಫೋರಂನಲ್ಲಿ ಈ ಯುವ ಸಾಫ್ಟ್‌ವೇರ್ ಡೆವಲಪರ್ ತನ್ನ ಅಚ್ಚರಿಯ ಬೆಳವಣಿಗೆಯನ್ನು ಹಂಚಿಕೊಂಡಿದ್ದಾನೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ತನ್ನ ವಾರ್ಷಿಕ ಸಂಬಳವನ್ನು ₹12 ಲಕ್ಷದಿಂದ ₹24 ಲಕ್ಷಕ್ಕೆ ಅಂದರೆ ಸರಿಯಾಗಿ ದ್ವಿಗುಣಗೊಳಿಸಿಕೊಂಡ ಕಥೆ ಈಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.
ಯಶಸ್ಸಿನ ಹಾದಿ ಶುರುವಾಗಿದ್ದು ಹೀಗೆ:
2023ರಲ್ಲಿ ಸಾಮಾನ್ಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ ಈ ಯುವಕನಿಗೆ ಕಾಲೇಜಿನಲ್ಲಿ ಉತ್ತಮ ಪ್ಲೇಸ್‌ಮೆಂಟ್ ಅವಕಾಶಗಳಿರಲಿಲ್ಲ. ಆದರೆ ಅವನು ಕಾಲೇಜು ಮುಗಿಯುವವರೆಗೆ ಕಾಯಲಿಲ್ಲ:
3ನೇ ವರ್ಷದಲ್ಲೇ ಆರಂಭ: ಕಾಲೇಜಿನ ಮಧ್ಯದಲ್ಲೇ ಒಂದು ಸ್ಟಾರ್ಟ್‌ಅಪ್‌ನಲ್ಲಿ ₹25,000 ಸ್ಟೈಫಂಡ್ ಪಡೆಯುತ್ತಾ ಸಾಫ್ಟ್‌ವೇರ್ ಇಂಟರ್ನ್ ಆಗಿ ಸೇರ್ಪಡೆಗೊಂಡ.
ಗುರುತಿಸಲ್ಪಟ್ಟ ಪ್ರತಿಭೆ: ಕೇವಲ ಐದೇ ತಿಂಗಳಲ್ಲಿ ಅವನ ಶ್ರಮಕ್ಕೆ ಮೆಚ್ಚುಗೆ ಸಿಕ್ಕಿ, ಸ್ಟೈಫಂಡ್ ₹35,000ಕ್ಕೆ ಏರಿಕೆಯಾಯಿತು. ಇದು ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ಫುಲ್-ಟೈಮ್ ಆಫರ್: ಅಂತಿಮ ವರ್ಷದಲ್ಲಿ ಇನ್ನೊಂದು ಕಂಪನಿಗೆ ಜಂಪ್ ಮಾಡಿ ₹12 ಲಕ್ಷದ ವಾರ್ಷಿಕ ಪ್ಯಾಕೇಜ್ ಪಡೆದ. ಅಲ್ಲಿಂದ ಎರಡೇ ವರ್ಷದಲ್ಲಿ ಅದು ₹24 ಲಕ್ಷ ದಾಟಿದೆ.
LinkedIn ಮೂಲಕ ಕೆಲಸ ಗಿಟ್ಟಿಸಿದ ‘ಮಾಸ್ಟರ್ ಪ್ಲ್ಯಾನ್
ಸಾಮಾನ್ಯವಾಗಿ ಉದ್ಯೋಗಾಕಾಂಕ್ಷಿಗಳು ಕೆಲಸಕ್ಕಾಗಿ ನೌಕ್ರಿ ಅಥವಾ ಲಿಂಕ್ಡ್‌ಇನ್‌ನ ‘ಜಾಬ್ಸ್’ ಸೆಕ್ಷನ್‌ನಲ್ಲಿ ಅರ್ಜಿ ಹಾಕಿ ತಿಂಗಳುಗಟ್ಟಲೆ ಕಾಯುತ್ತಾರೆ. ಆದರೆ ಈ ಟೆಕ್ಕಿ ಬಳಸಿದ್ದು ಮಾತ್ರ ಸಖತ್ ಸ್ಮಾರ್ಟ್ ಐಡಿಯಾ. ಅವನು ಯಾವುದೇ ಜಾಬ್ ಪೋರ್ಟಲ್‌ಗಳ ಮೇಲೆ ಅವಲಂಬಿತವಾಗದೆ, ‘ಡೈರೆಕ್ಟ್ ಅಟ್ಯಾಕ್’ ಫಾರ್ಮುಲಾ ಬಳಸಿದ್ದ.
ಹೇಗಿತ್ತು ಇವನ ಉದ್ಯೋಗ ಬೇಟೆಯ ಸ್ಮಾರ್ಟ್ ಹಾದಿ?
1.ಫಂಡಿಂಗ್ ಪಡೆದ ಸ್ಟಾರ್ಟ್‌ಅಪ್‌ಗಳೇ ಟಾರ್ಗೆಟ್, ಅವನು ಮೊದಲು ಮಾಡುತ್ತಿದ್ದ ಕೆಲಸವೆಂದರೆ, ಇತ್ತೀಚೆಗಷ್ಟೇ ಹೂಡಿಕೆ (Funding) ಪಡೆದ ಸಣ್ಣ ಮತ್ತು ಹೊಸ ಸ್ಟಾರ್ಟ್‌ಅಪ್‌ಗಳನ್ನು ಹುಡುಕುವುದು. ಏಕೆಂದರೆ, ಹೂಡಿಕೆ ಪಡೆದ ಕಂಪನಿಗಳು ಅತಿ ವೇಗವಾಗಿ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತವೆ ಎಂಬುದು ಅವನಿಗೆ ತಿಳಿದಿತ್ತು.
2.ಫೌಂಡರ್‌ಗಳಿಗೆ ನೇರ ಮೆಸೇಜ್ (Direct DM): ಯಾವುದೇ ಎಚ್‌ಆರ್ (HR) ಅಥವಾ ಕನ್ಸಲ್ಟೆನ್ಸಿಗಳ ಮೂಲಕ ಹೋಗುವ ಬದಲು, ನೇರವಾಗಿ ಕಂಪನಿಯ ಸಂಸ್ಥಾಪಕರಿಗೆ (Founders) ಲಿಂಕ್ಡ್‌ಇನ್‌ನಲ್ಲಿ ಮೆಸೇಜ್ ಮಾಡುತ್ತಿದ್ದ. ಇದರಿಂದ ಮಧ್ಯವರ್ತಿಗಳಿಲ್ಲದೆ ನೇರವಾಗಿ ನಿರ್ಧಾರ ತೆಗೆದುಕೊಳ್ಳುವವರ ಗಮನ ಸೆಳೆಯುವುದು ಅವನಿಗೆ ಸುಲಭವಾಯಿತು.
3.ಶಾರ್ಟ್ ಅಂಡ್ ಸ್ವೀಟ್ ಪ್ರೊಫೈಲ್: ಅವನು ಕಳುಹಿಸುತ್ತಿದ್ದ ಮೆಸೇಜ್ ಉದ್ದವಾಗಿರುತ್ತಿರಲಿಲ್ಲ. ತನ್ನ ರೆಸ್ಯೂಮ್ ಜೊತೆಗೆ,ತಾನು ಯಾವ ರೀತಿಯ ಕೆಲಸ ಹುಡುಕುತ್ತಿದ್ದೇನೆ?ಕಂಪನಿಗೆ ತನ್ನಿಂದ ಆಗುವ ಲಾಭವೇನು? ಎಂಬುದನ್ನು ಕೇವಲ ಎರಡೇ ಸಾಲಿನಲ್ಲಿ ವಿವರಿಸಿ ಕಳುಹಿಸುತ್ತಿದ್ದ. ಇದೇ ಅವನಿಗೆ ಅತಿ ಹೆಚ್ಚು ರಿಪ್ಲೈಗಳು ಬರಲು ಕಾರಣವಾಯಿತು.

