ಕೊಪ್ಪಳ: ಟಾಟಾ ಏಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಗ್ರಾಮದ ಬಳಿ ನಡೆದಿದೆ.
ಬಂಡಿ ಹರ್ಲಾಪುರ ನಿವಾಸಿಗಳಾದ ಹುಲ್ಲೇಶ್ ವಾಲಿಕಾರ, ಮಾರುತಿ ಮೃತ ದುರ್ದೈವಿಗಳು. ಇಬ್ಬರು ಯುವಕರು ಮುಕುಂದ್ ಸ್ಟೀಲ್ ಕಂಪನಿಯ ಉದ್ಯೋಗಿಗಳಾಗಿದ್ದರು. ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಡೆತ್ ನೋಟ್ ಬರೆದಿಟ್ಟು ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣು
ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರೈತ ಸಂಘದ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಮರಳುಕುಂಟೆ ರಾಮಾಂಜಿನಪ್ಪ ಆತ್ಮಹತ್ಯೆಗೆ ಶರಣಾಗಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ. ಸಾಅವಿಗೂ ಮುನ್ನ ರಾಂಜಿನಪ್ಪ ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ.
ನಗರದ ವಾಪಸಂದ್ರ ಬಡಾವಣೆಯ ಹಾಲು ಉತ್ಪಾದಕರ ಸಹಕಾರ ಸಂಘದ(ಡೈರಿ) ಮೇಲ್ಭಾಗದಲ್ಲಿರುವ ರೈತ ಸಂಘದ ಕಚೇರಿಯ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ರಾಮಾಂಜಿನಪ್ಪ ಅವರ ಮೃತದೇಹ ಪತ್ತೆಯಾಗಿದ್ದು, ಸ್ಥಳದಲ್ಲಿ ಡೆತ್ನೋಟ್ ಸಹ ಪತ್ತೆಯಾಗಿದೆ.
ಡೆತ್ನೋಟ್ನಲ್ಲಿ ಜಮೀನು ಮಾರಾಟದ ಬಾಕಿ ಹಣ ಬಾರದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮಾನಸಿಕವಾಗಿ ನೊಂದು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿರುವುದಾಗಿ ರಾಮಾಂಜಿನಪ್ಪ ಉಲ್ಲೇಖಿಸಿದ್ದಾರೆ.
ರಾಮಾಂಜಿನಪ್ಪ ಅವರು ತಮ್ಮ ಮಾಲೀಕತ್ವದ 35 ಗುಂಟೆ ಜಮೀನನ್ನು ರವೀಂದ್ರರೆಡ್ಡಿ ಎಂಬವರಿಗೆ ಒಟ್ಟು 77 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು.ಆದರೆ ಜಮೀನು ಖರೀದಿಸಿದ್ದ ರವೀಂದ್ರರೆಡ್ಡಿ ಮುಂಗಡ ಹಾಗೂ ಕಂತುಗಳ ರೂಪದಲ್ಲಿ ₹57.50 ಲಕ್ಷ ಮಾತ್ರ ಪಾವತಿಸಿದ್ದು, ಉಳಿದ ₹19.50 ಲಕ್ಷ ಬಾಕಿ ಉಳಿಸಿಕೊಂಡಿದ್ದರು ಎಂದು ಡೆತ್ನೋಟ್ನಲ್ಲಿ ಉಲ್ಲೇಖಿದ್ದಾರೆ.
ಕಳೆದ ಹತ್ತು ತಿಂಗಳಿಂದ ಬಾಕಿ ಹಣ ನೀಡದೆ ಕಾಲಹರಣ ಮಾಡುತ್ತಿದ್ದು, ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗಿ ರಾಮಾಂಜಿನಪ್ಪ ಪತ್ರದಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟ ಹಾಗೂ ಬರಬೇಕಾದ ಹಣ ಕೈಸೇರದೆ ತೀವ್ರ ಹತಾಶೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಮಾಂಜಿನಪ್ಪ ಪತ್ರದಲ್ಲಿ ಬರೆದಿದ್ದಾರೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ.
ರೈತರ ಪರವಾಗಿ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ರೈತ ಸಂಘದ ತಾಲೂಕು ಅಧ್ಯಕ್ಷರೊಬ್ಬರು ತಾವು ಕಾರ್ಯನಿರ್ವಹಿಸುತ್ತಿದ್ದ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿರುವುದು ಜಿಲ್ಲೆಯ ರೈತ ಸಮುದಾಯ ಹಾಗೂ ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ.
ಡೆತ್ನೋಟ್ ಆಧರಿಸಿ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

