ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಮತ್ತು ಹಳೆ ಪಿಂಚಣಿ ಯೋಜನೆ (ಒಪಿಎಸ್) ನಡುವಿನ ಗೊಂದಲದಲ್ಲಿ ಸಿಲುಕಿದ್ದಾರೆ. ವಿವಿಧ ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಪುನಃ ಸ್ಥಾಪನೆ ಮಾಡಲಾಗಿದೆ.
ಕೇಂದ್ರ ಸರ್ಕಾರ ತನ್ನ ನೌಕರರಿಗಾಗಿ ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಈಗ ರಾಜ್ಯ ಸರ್ಕಾರವೊಂದು ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡಿದೆ. ಇದು ಹಳೆ ಪಿಂಚಣಿ ಯೋಜನೆ (ಒಪಿಎಸ್) ಮಾದರಿಯಲ್ಲಿಯೇ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡಲಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಹಳೆಯ ಪಿಂಚಣಿ ಯೋಜನೆಗೆ ಸಮಾನವಾದ ಪ್ರಯೋಜನಗಳನ್ನು ನೀಡುವ ತಮಿಳುನಾಡು ಖಚಿತ ಪಿಂಚಣಿ ಯೋಜನೆ (Tamil Nadu Assured Pension Scheme – TAPS) ಎಂಬ ಹೊಸ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.
ಈ ವರ್ಷ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಆಡಳಿತ ಪಕ್ಷ ಡಿಎಂಕೆ ಮಾಡಿದ ಈ ಘೋಷಣೆ ಸರ್ಕಾರಿ ನೌಕರರ ಮತಗಳನ್ನು ಸೆಳೆಯಲು ಎಂದು ವಿಶ್ಲೇಷಿಸಲಾಗುತ್ತಿದೆ. ಈ ಪಿಂಚಣಿ ಯೋಜನೆಯ ಪ್ರಮುಖ ಅಂಶಗಳನ್ನು ಸಹ ಘೋಷಣೆ ಮಾಡಲಾಗಿದೆ.
ಯೋಜನೆಯ ಪ್ರಮುಖ ಅಂಶಗಳು
- ಖಚಿತ ಪಿಂಚಣಿ: ಸರ್ಕಾರಿ ನೌಕರರು ಮತ್ತು ಶಿಕ್ಷಕರು ತಮ್ಮ ಕೊನೆಯ ತಿಂಗಳ ಸಂಬಳದ ಶೇ 50 ರಷ್ಟು ಮೊತ್ತವನ್ನು ಖಚಿತ ಪಿಂಚಣಿಯಾಗಿ ಪಡೆಯುತ್ತಾರೆ.
- ಕೊಡುಗೆ: ನೌಕರರು ತಮ್ಮ ಸಂಬಳದ ಶೇ 10 ರಷ್ಟು ಕೊಡುಗೆ ನೀಡುತ್ತಾರೆ. ಆದರೆ, ಖಚಿತ ಪಿಂಚಣಿಯನ್ನು ಖಾತರಿಪಡಿಸಲು ಬೇಕಾಗುವ ಉಳಿದ ಎಲ್ಲಾ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಮಿಳುನಾಡು ಸರ್ಕಾರವೇ ಭರಿಸಲಿದೆ.
- ತುಟ್ಟಿಭತ್ಯೆ: ಸೇವೆಯಲ್ಲಿರುವ ಸರ್ಕಾರಿ ನೌಕರರಿಗೆ ನೀಡುವಂತೆಯೇ, ಪಿಂಚಣಿದಾರರಿಗೂ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಅರ್ಹತೆ ಇರುತ್ತದೆ.
- ಕುಟುಂಬ ಪಿಂಚಣಿ: ಪಿಂಚಣಿದಾರರ ಮರಣದ ಸಂದರ್ಭದಲ್ಲಿ, ಅವರು ಪಡೆಯುತ್ತಿದ್ದ ಕೊನೆಯ ಪಿಂಚಣಿಯ ಶೇ 60ರಷ್ಟು ಮೊತ್ತವನ್ನು ನಾಮನಿರ್ದೇಶಿತ ಕುಟುಂಬ ಸದಸ್ಯರಿಗೆ ಕುಟುಂಬ ಪಿಂಚಣಿಯಾಗಿ ನೀಡಲಾಗುವುದು.
- ಉಪದಾನ: ಸೇವೆಯ ಅವಧಿಯನ್ನು ಆಧರಿಸಿ, ನಿವೃತ್ತಿಯ ಸಮಯದಲ್ಲಿ ಅಥವಾ ಸೇವೆಯಲ್ಲಿದ್ದಾಗ ಮರಣ ಹೊಂದಿದರೆ 25 ಲಕ್ಷ ರೂ. ವರೆಗೆ ಗ್ರಾಚ್ಯುಟಿ ಪಾವತಿಸಲಾಗುವುದು.
- ಕನಿಷ್ಠ ಪಿಂಚಣಿ: ಈ ಯೋಜನೆ ಜಾರಿಯಾದ ನಂತರ, ಪಿಂಚಣಿಗೆ ಅಗತ್ಯವಿರುವ ಕನಿಷ್ಠ ಸೇವಾ ಅವಧಿಯನ್ನು ಪೂರೈಸದೆ ನಿವೃತ್ತರಾಗುವ ಎಲ್ಲಾ ನೌಕರರಿಗೂ ಕನಿಷ್ಠ ಪಿಂಚಣಿಯನ್ನು ಖಚಿತಪಡಿಸಲಾಗುವುದು.
- ವಿಶೇಷ ಅನುಕಂಪದ ಪಿಂಚಣಿ: ಕೊಡುಗೆ ಪಿಂಚಣಿ ಯೋಜನೆ ಅಡಿಯಲ್ಲಿ ಸೇವೆಗೆ ಸೇರಿ, ಹೊಸ ಪಿಂಚಣಿ ಯೋಜನೆ ಜಾರಿಗೆ ಬರುವ ಮೊದಲೇ ಪಿಂಚಣಿ ಇಲ್ಲದೆ ನಿವೃತ್ತರಾದ ನೌಕರರಿಗೆ ವಿಶೇಷ ಅನುಕಂಪದ ಪಿಂಚಣಿ ನೀಡಲಾಗುವುದು.
- ಸರ್ಕಾರದ ಅನುದಾನ: ರಾಜ್ಯ ಸರ್ಕಾರವು ಪಿಂಚಣಿ ನಿಧಿಗೆ ಏಕಕಾಲಕ್ಕೆ 13,000 ಕೋಟಿ ರೂ. ಗಳ ಹೆಚ್ಚುವರಿ ಕೊಡುಗೆಯನ್ನು ನೀಡಲಿದೆ.
- ವಾರ್ಷಿಕ ಹಂಚಿಕೆ: ತಮಿಳುನಾಡು ಸರ್ಕಾರವು ವಾರ್ಷಿಕವಾಗಿ ಸುಮಾರು 11,000 ಕೋಟಿ ರೂ. ಗಳನ್ನು ಈ ಯೋಜನೆಗೆ ನೀಡಲಿದ್ದು, ಸಂಬಳ ಪರಿಷ್ಕರಣೆಗೆ ಅನುಗುಣವಾಗಿ ಈ ಮೊತ್ತವು ಪ್ರತಿ ವರ್ಷ ಹೆಚ್ಚಾಗಲಿದೆ.
- ನೌಕರರ ಕಲ್ಯಾಣ: ಆರ್ಥಿಕ ಮುಗ್ಗಟ್ಟಿನ ನಡುವೆಯೂ, ಸರ್ಕಾರಿ ನೌಕರರು ಮತ್ತು ಶಿಕ್ಷಕರ ಹಿತರಕ್ಷಣೆಗಾಗಿ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
ಈ ಯೋಜನೆಯು ಸರ್ಕಾರಿ ನೌಕರರು ಮತ್ತು ಶಿಕ್ಷಕರ 20 ವರ್ಷಗಳ ಹಳೆಯ ಬೇಡಿಕೆಯನ್ನು ಈಡೇರಿಸುತ್ತಿದ್ದು, ಅವರಿಗೆ ಮತ್ತು ಅವರ ಕುಟುಂಬಗಳಿಗೆ ಪಿಂಚಣಿ ನಿಶ್ಚಿತತೆ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

