ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ- ನಿಮ್ಹಾನ್ಸ್ ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಗಳಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಎರಡೂ ಆಸ್ಪತ್ರೆಗಳಿಗೆ ಕೌನ್ಸೆಲಿಂಗ್ ಹಾಗೂ ಚಿಕಿತ್ಸೆಗೆಂದು ಬಂದಿದ್ದ ಸುಮಾರು ೫೫ ರೋಗಿಗಳು ನಾಪತ್ತೆಯಾಗಿದ್ದಾರೆ.
ನಿಮ್ಹಾನ್ಸ್ ಹಾಗೂ ಕಿದ್ವಾಯಿ ಆಸ್ಪತ್ರೆಗಳಲ್ಲಿ ಕಳೆದ 20 ತಿಂಗಳಲ್ಲಿ ಸಮಾಲೋಚನೆ ಹಾಗೂ ಚಿಕಿತ್ಸೆಗೆ ಬಂದಿದ್ದ 55 ರೋಗಿಗಳು ನಾಪತ್ತೆಯಾಗಿದ್ದಾರೆ. ಈ ಪೈಕಿ ಮೂವರು ರೋಗಿಗಳ ಸುಳಿವು ಈವರೆಗೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಹೆಚ್ಚಿನ ರೋಗಿಗಳು 2024ರ ಜನವರಿ 1ರಿಂದ 2025ರ ಆಗಸ್ಟ್ 14ರ ಅವಧಿಯಲ್ಲಿ ನಾಪತ್ತೆಯಾಗಿದ್ದು, ಅನಿರೀಕ್ಷಿತ ಸಂದರ್ಭಗಳಲ್ಲಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ರೋಗಿಗಳ ಪೋಷಕರು ಬಿಲ್ ಗಳನ್ನು ಪಾವತಿಸುವಾಗ, ಔಷಧಗಳನ್ನು ಖರೀದಿಸುವಾಗ, ಫೀನ್ ಕರೆಗಳಲ್ಲಿ ನಿರತರಾಗಿದ್ದಾಗ ಅಥವಾ ಹೊರ ರೋಗಿಗಳ ವಿಭಾಗದಲ್ಲಿ ಇತರರೊಂದಿಗೆ ಅನುಭವ ಹಂಚಿಕೊಳ್ಳುತ್ತಿದ್ದಾಗ ನಾಪತ್ತೆಯಾಗಿದ್ದಾರೆ ಎಂದು ದಾಖಲೆಗಳು ತಿಳಿಸಿವೆ.
ಜಯನಗರದ ಸಿದ್ದಾಪುರ ಠಾಣೆಯಲ್ಲಿ ದಾಖಲಾದ ನಾಪತ್ತೆ ಕೇಸ್ ಪ್ರಕಾರ ಕಾಡಪ್ಪ ರೋಡನ್ನವರ್ (84) 2024ರ ಮೇ 23ರಿಂದ ನಾಪತ್ತೆಯಾಗಿದ್ದಾರೆ. ಮುನಿಕೃಷ್ಣ (70) 2025ರ ನವೆಂಬರ್ 6ರಿಂದ ನಾಪತ್ತೆಯಗೈದ್ದಾರೆ. ಶಾಂತಸ್ವಾಮಿ (52) 2025ರ ಏಪ್ರಿಲ್ 30ರಿಂದ ನಾಪತ್ತೆಯಾಗಿದ್ದಾರೆ. ಈ ಮೂವರ ಸುಳಿವು ಇನ್ನೂ ಸಿಕ್ಕಿಲ್ಲ.
2024ರಲ್ಲಿ ನಿಮ್ಹಾನ್ಸ್ ನ 27 ರೋಗಿಗಳು, ಕಿದ್ವಾಯಿ ಆಸ್ಪತ್ರೆಯ 3 ರೋಗಿಗಳು ನಾಪತ್ತೆಯಾಗಿದ್ದಾರೆ. 2025ರಲ್ಲಿ ನಿಮ್ಹಾನ್ಸ್ ನ 22 ರೋಗಿಗಳು, ಕಿದ್ವಾಯಿಯ 3 ರೋಗಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

