ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸಿತು. ಅದರಂತೆ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿ ದಕ್ಷಿಣ ಆಫ್ರಿಕಾಗೆ 177 ರನ್‌ಗಳ ಗುರಿಯನ್ನು ನೀಡಿದೆ.
ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಬ್ರಾಂಡನ್ ಕಿಂಗ್ ಹಾಗೂ ಶಾಯ್ ಹೋಪ್ ಮೊದಲ ಓವರ್‌ನಲ್ಲೇ 17 ರನ್ ಬಾರಿಸಿ ಒಳ್ಳೆಯ ಆರಂಭ ಕಟ್ಟಿಕೊಟ್ಟರು. ಆದರೆ ಮೂರನೇ ಓವರ್‌ನಲ್ಲಿ ಹೋಪ್ ಹಾಗೂ ಆಗಷ್ಟೇ ಕಣಕ್ಕಿಳಿದ ಶಿಮ್ರಾನ್ ಹೆಟ್ಮಾಯೆರ್ ವಿಕೆಟ್ ಒಪ್ಪಿಸಿದ ಕಾರಣ ತಂಡ ಸಂಕಷ್ಟಕ್ಕೆ ಸಿಲುಕಿತು. ಶಾಯ್ ಹೋಪ್ 16 ರನ್ ಬಾರಿಸಿದರೆ, ಹೆಟ್ಮಾಯೆರ್ 2 ರನ್ ಕಲೆಹಾಕಿದರು. ಬೆನ್ನಲ್ಲೇ ಬ್ರಾಂಡನ್ ಕಿಂಗ್ 21, ರಾಸ್ಟನ್ ಚೇಸ್ 2, ರೊವ್‌ಮನ್ ಪೊವೆಲ್ 9, ಮ್ಯಾಥ್ಯೂ ಫೋರ್ಡ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಹೀಗೆ ಕೇವಲ 10.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 83 ರನ್ ಕಲೆಹಾಕಿದ್ದ ವೆಸ್ಟ್ ಇಂಡೀಸ್ ಅಲ್ಪಮೊತ್ತಕ್ಕೆ ತನ್ನ ಇನ್ನಿಂಗ್ಸ್ ಮುಗಿಸಲಿದೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ ಎಂಟನೇ ವಿಕೆಟ್‌ಗೆ ಜತೆಯಾದ ಜೇಸನ್ ಹೋಲ್ಡರ್ ಹಾಗೂ ರೊಮಾರಿಯೊ ಶೆಫರ್ಡ್ ಕೊನೆಯ ಓವರ್‌ವರೆಗೂ ಜವಾಬ್ದಾರಿಯುತ ಆಟವನ್ನಾಡಿ ಅಂತಿಮ ಹಂತದಲ್ಲಿ ಅಬ್ಬರಿಸಿ 57 ಎಸೆತಗಳಲ್ಲಿ 89 ರನ್ ಜತೆಯಾಟ ಕಟ್ಟಿಕೊಟ್ಟು ತಂಡವನ್ನು ಭಾರೀ ಕುಸಿತದಿಂದ ಪಾರು ಮಾಡಿದರು. ಕೊನೆಯ ಎರಡು ಓವರ್ ಹೆಚ್ಚು ರನ್ ಹರಿದುಬರದಿದ್ದರೂ ಸಹ ತಂಡದ ಮೊತ್ತ 170+ ದಾಟುವ ಮಟ್ಟಕ್ಕೆ ಅಬ್ಬರಿಸಿದರು. ಜೇಸನ್ ಹೋಲ್ಡರ್ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 49 ರನ್ ಬಾರಿಸಿದರೆ, ರೊಮಾರಿಯೊ ಶೆಫರ್ಡ್ 37 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 52 ರನ್ ಬಾರಿಸಿದರು ಹಾಗೂ ಯಾವುದೇ ರನ್ ಗಳಿಸದ ಗುಡಕೇಶ್ ಮೋಟಿ ಅಜೇಯರಾಗಿ ಉಳಿದರು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ ಮೂರು ವಿಕೆಟ್, ಕಗಿಸೊ ರಬಾಡಾ ಹಾಗೂ ಕಾರ್ಬಿನ್ ಬಾಷ್ ತಲಾ ಎರಡು ವಿಕೆಟ್ ಪಡೆದರು.

