ಕರ್ನಾಟಕದ ಬಹು ನಿರೀಕ್ಷಿತ ರೈಲ್ವೆ ಯೋಜನೆ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ನೇರ ರೈಲು ಮಾರ್ಗ. ತುಮಕೂರು ಸಂಸದ ವಿ.ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಯೋಜನೆ ಚುರುಕಾಗಿ ಸಾಗುತ್ತಿದೆ.
ಗುರುವಾರ ಹೊಸ ರೈಲು ಮಾರ್ಗ ಯೋಜನೆಯನ್ನು ಮೋಟಾರ್ ಟ್ರ್ಯಾಲಿ ಮೂಲಕ ಸಚಿವ ವಿ.ಸೋಮಣ್ಣ, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪರಿಶೀಲನೆ ನಡೆಸಿದರು. ಬಳಿಕ ಆನಗೋಡು ಗ್ರಾಮದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಚಿವರ ಜೊತೆ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸಂಸದರು ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಮನವಿಗಳನ್ನು ಸಲ್ಲಿಸಿದರು.
ಮನವಿಗಳು
* ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯ ಬಾಲಭವನದಲ್ಲಿ ಮಕ್ಕಳಿಗಾಗಿ ಟಾಯ್ ಟ್ರೇನ್ ಸೇವೆ ಆರಂಭಿಸಬೇಕು.
* ದಾವಣಗೆರೆ–ಹರಿಹರ–ಬಳ್ಳಾರಿ ಮಾರ್ಗದಲ್ಲಿ ಸಂಚರಿಸುವ DEMU ರೈಲು ಸಂಖ್ಯೆ 07395/ 07396ರಲ್ಲಿ ಮಹಿಳಾ ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯ ಒದಗಿಸಬೇಕು.
* ಹರಿಹರ–ಚಿತ್ರದುರ್ಗ ಪ್ರಯಾಣಿಕರ ರೈಲನ್ನು ಮರು ಪ್ರಾರಂಭಿಸಬೇಕು.
* ರೈಲು ಸಂಖ್ಯೆ 12725-26 ಮತ್ತು 17325-26ಗಳಿಗೆ ಮಾಯಕೊಂಡ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು.
* ಹನುಮನಹಳ್ಳಿ ರೈಲು ನಿಲ್ದಾಣದಲ್ಲಿ ಕುಡಿಯುವ ನೀರು, ನಿರೀಕ್ಷಣಾ ಸ್ಥಳಕ್ಕೆ ಮೇಲ್ಛಾವಣಿ, ಕುರ್ಚಿಗಳು, ಶೌಚಾಲಯ ವ್ಯವಸ್ಥೆ ಹಾಗೂ ವೇದಿಕೆ ಸಂಖ್ಯೆ 2 ವಿಸ್ತರಣೆ ಕೈಗೊಳ್ಳಬೇಕು.
* ಹುಬ್ಬಳ್ಳಿ–ವಿಜಯವಾಡ ರೈಲನ್ನು ಯಶವಂತಪುರ ಜಂಕ್ಷನ್ ತನಕ ವಿಸ್ತರಿಸಬೇಕು.
* ರೈಲ್ವೆಗಾಗಿ ಭೂಸ್ವಾಧೀನಗೊಂಡ ಹಿನ್ನೆಲೆ ಮನವಿದಾರರ ಸಂಬಂಧಿ ರೇಣುಕಾ ಅವರಿಗೆ ದಯಾಪಾಲನಾ ಆಧಾರದ ಮೇಲೆ ರೈಲ್ವೆಯಲ್ಲಿ ಉದ್ಯೋಗ ನೀಡಬೇಕು.
* ಹರಿಹರ ರೈಲು ನಿಲ್ದಾಣದಲ್ಲಿ ಅಪಘಾತ ತಡೆಗೆ ಅಗತ್ಯ ಮುನ್ನೆಚ್ಚರಿಕಾ ನಾಗರಿಕ ಕಾಮಗಾರಿಗಳನ್ನು ಕೈಗೊಳ್ಳಬೇಕು.
* ಕರ್ನಾಟಕದಿಂದ ಜಮ್ಮು–ಕಾಶ್ಮೀರದವರೆಗೆ (ಬೆಂಗಳೂರು–ಹುಬ್ಬಳ್ಳಿ–ಮಿರಾಜ್–ಅಮೃತಸರ–ವೈಷ್ಣೋ ದೇವಿ–ಕತ್ರಾ) ದೀರ್ಘದೂರ ರೈಲು ಸೇವೆ ಆರಂಭಿಸಬೇಕು.
* ದಾವಣಗೆರೆ–ತುಮಕೂರು ರೈಲು ಹಳಿ ಕಾಮಗಾರಿಯನ್ನು ವೇಗಗೊಳಿಸಿ ಶೀಘ್ರ ಸಂಚಲನಕ್ಕೆ ತರಬೇಕು.
* ಬೆಳಗಾವಿ–ಮೈಸೂರು ರೈಲು ಸಂಖ್ಯೆ 17302ರ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು.

