ನಿನ್ನೆಯಿಂದ ( ಫೆಬ್ರವರಿ 21 ) ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಪಂದ್ಯಗಳು ಆರಂಭಗೊಂಡಿವೆ. ಕೊಲಂಬೊದಲ್ಲಿ ಆಯೋಜನೆಯಾಗಿದ್ದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಸುತ್ತಿನ ಚೊಚ್ಚಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಇಂದು ಎರಡು ಪಂದ್ಯಗಳು ನಡೆಯಲಿವೆ.
ಹೀಗೆ ಸೂಪರ್ 8 ಸುತ್ತು ಆರಂಭವಾಗಿದ್ದು, ಗ್ರೂಪ್ ಹಂತದಲ್ಲಿನ ನಾಲ್ಕು ಗುಂಪುಗಳ ಎಲ್ಲ ಗುಂಪುಗಳಲ್ಲೂ ಟಾಪ್ 2 ಸ್ಥಾನಗಳನ್ನು ಪಡೆದ ತಂಡಗಳನ್ನು ಈ ಸುತ್ತಿಗೆ ಪರಿಗಣಿಸಲಾಗಿದೆ. ಈ ನಿಯಮ ಈ ಹಿಂದಿನಿಂದಲೂ ಇದೆ. ಆದರೆ ನೆಟ್ಟಿಗರು ಸೂಪರ್ 8 ಸುತ್ತಿನ ಎರಡು ಗುಂಪುಗಳಿಗೆ ತಂಡಗಳನ್ನು ಹಂಚಿಕೆ ಮಾಡಿರುವ ರೀತಿಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಹೌದು, ಎರಡೂ ಗುಂಪುಗಳಿಗೂ ಹೆಚ್ಚು ಗೆದ್ದ ಹಾಗೂ ಕಡಿಮೆ ಗೆದ್ದ ತಂಡಗಳನ್ನು ಸರಿಸಮನಾಗಿ ಹಂಚದೇ ಈ ಹಿಂದೆಯೇ ಈ ತಂಡಗಳು ಈ ಗುಂಪಿಗೆ ಹೋಗಬೇಕು ಎಂಬುದನ್ನು ನಿರ್ಧರಿಸಿದ್ದ ಕಾರಣ ಸದ್ಯ ಗ್ರೂಪ್ 1ರಲ್ಲಿ ಇರುವ ತಂಡಗಳಿಗೆ ಮೋಸವಾಗಿದೆ ಎಂದು ಕ್ರಿಕೆಟ್ ಪ್ರೇಮಿಗಳು ಐಸಿಸಿ ನಿರ್ಧಾರವನ್ನು ಖಂಡಿಸಿದ್ದಾರೆ.
ಹೌದು, ಗ್ರೂಪ್ 1ರಲ್ಲಿ ಸ್ಥಾನ ಪಡೆದಿರುವ ಭಾರತ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು ಗ್ರೂಪ್ ಹಂತದಲ್ಲಿ ಆಡಿದ ಯಾವ ಪಂದ್ಯವನ್ನೂ ಸೋಲದೇ ಅರ್ಹತೆ ಪಡೆದುಕೊಂಡ ತಂಡಗಳು. ಅತ್ತ ಗ್ರೂಪ್ 2 ನೋಡಿದರೆ ಅಲ್ಲಿ ಎಲ್ಲ ತಂಡಗಳು ಒಂದೊಂದು ಪಂದ್ಯ ಸೋತಿವೆ. ಹೀಗಾಗಿ ಗ್ರೂಪ್ 1ರಲ್ಲಿ ಇರುವ ನಾಲ್ಕು ತಂಡಗಳ ಪೈಕಿ ಟಾಪ್ 2 ಸ್ಥಾನ ಪಡೆದ ತಂಡಗಳು ಮಾತ್ರ ಸೆಮಿಫೈನಲ್‌ಗೆ ಲಗ್ಗೆ ಇಡಲಿದ್ದು, ಗ್ರೂಪ್ ಹಂತದಲ್ಲಿ ಹೆಚ್ಚು ಪಂದ್ಯ ಗೆದ್ದದ್ದಕ್ಕೆ ಅನ್ಯಾಯವಾಗಲಿದೆ ಎಂದಿದ್ದಾರೆ.
ಹೀಗೆ ಮಾಡದೇ ಪಾಯಿಂಟ್ಸ್ ಟೇಬಲ್ ಆಧರಿಸಿ ಎರಡೂ ಗುಂಪುಗಳಿಗೂ ಸರಿಸಮನಾಗಿ ತಂಡಗಳನ್ನು ಹಂಚಿದ್ದರೆ ಹೆಚ್ಚು ಗೆದ್ದ ತಂಡಗಳಿಗೆ ಅನುಕೂಲವಾಗುತ್ತಿತ್ತು, ಅನ್ಯಾಯವಾಗುತ್ತಿರಲಿಲ್ಲ ಎಂದೂ ಸಹ ಬೇಸರ ಹೊರಹಾಕಿದ್ದಾರೆ.
ಇದಕ್ಕೆ ಜಿಂಬಾಬ್ವೆ ತಂಡವನ್ನು ಉದಾಹರಣೆಯನ್ನಾಗಿ ನೀಡಿದ ನೆಟ್ಟಿಗರು ಜಿಂಬಾಬ್ವೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆದ್ದಿದೆ (ಒಂದು ಡ್ರಾ). ಬಲಿಷ್ಟ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾಗಳನ್ನು ಮಣಿಸಿದೆ. ಅಂತಹ ತಂಡವನ್ನು ಈಗ ಸೂಪರ್ 8ನಲ್ಲಿ ಎಲ್ಲ ಗೆದ್ದ ತಂಡಗಳ ಜತೆ ಸೇರಿಸಿರುವುದು ಎಷ್ಟು ಸರಿ ಎಂದು ಪ್ರಶ್ನೆ ಹಾಕಿದ್ದಾರೆ.

