ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ಸ್ಟೂಡೆಂಟ್ ಎಲೆಕ್ಷನ್ ಪುನರಾರಂಭಿಸುವ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯಾಯಿತು.
ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರಮುಖವಾಗಿ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಮಾಡುವ ವಿಚಾರ, ವಿವಿ ಕ್ಯಾಂಪಸ್ ಗಳನ್ನು ಡ್ರಗ್ಸ್ ಮುಕ್ತ ಮಾಡಲು ಸೂಚನೆ, ಕಾಲೇಜುಗಳಲ್ಲಿ ಸ್ಟೂಡೆಂಟ್ಸ್ ಚುನಾವಣೆ ವಿಚಾರಗಳ ಬಗ್ಗೆ ಚರ್ಚಿಸಿ ಸಲಹೆ ಸೂಚನೆ ನೀಡುವಂತೆ ವಿಸಿಗಳಿಗೆ ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ಚಿಂತನೆ ನಡೆದಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ವಿಸಿಗಳಿಂದ ಅಭಿಪ್ರಾಯ ಕೇಳಿದರು. ಮೊಬೈಲ್ ಬ್ಯಾನ್ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿಗಳು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕಿದ್ದು, ಆಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದೆ. ಸೋಷಿಯಲ್ ಮೀಡಿಯಾಗಳಿಂದ ವಿದ್ಯಾರ್ಥಿಗಳು ಹಾಳಾಗುತ್ತಿರುವ ಆರೋಪ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಷೇಧಕ್ಕೆ ಚಿಂತನೆ ನಡೆದಿದೆ. ಹಾಗಾಗಿ ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ನಿಷೇಧವಾಗುವ ಸಾಧ್ಯತೆ ದಟ್ಟವಾಗಿದ್ದು, ಸರ್ಕಾರದ ಅಂತಿಮ ತೀರ್ಮಾನದ ಬಗ್ಗೆ ಕಾದುನೋಡಬೇಕಿದೆ.
ಇನ್ನು ಡ್ರಗ್ಸ್ ಒಂದು ಪಿಡುಗಾಗಿದ್ದು, ವಿಶ್ವ ವಿದ್ಯಾಲಯಗಳ ಕಾಂಪಸ್ಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಇದೇ ವೇಳೆ ವಿಸಿಗಳಿಗೆ ಸೂಚಿಸಿದ್ದಾರೆ.
ಪ್ರಮುಖವಾಗಿ ಸ್ಟೂಡೆಂಟ್ ಎಲೆಕ್ಷನ್ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ನಮ್ಮ ಕಾಲದಲ್ಲಿ ಚುನಾವಣೆ ಇತ್ತು, ನಾವು ಅಲ್ಲಿಂದಲೇ ಬಂದಿರುವುದು. ಹೀಗಾಗಿ ಷರತ್ತುಗಳನ್ನು ಹಾಕಿ ಚುನಾವಣೆಗೆ ಅವಕಾಶ ಕೊಡಲು ಚಿಂತನೆ ಇದೆ. ಚುನಾವಣೆ ಆಗದಿದ್ದರೆ ವಿದ್ಯಾರ್ಥಿಗಳು ನಾಯಕರಾಗಿ ಬೆಳೆಯಲು ಸಾಧ್ಯವಿಲ್ಲ. ಭಾರತದಲ್ಲಿ ವಿದ್ಯಾರ್ಥಿ ನಾಯಕರು ಇಲ್ಲ. ಹಾಗಾಗಿ ವಿದ್ಯಾರ್ಥಿ ಚುನಾವಣೆ ಬಗ್ಗೆ ಸಲಹೆ ಕೊಡುವಂತೆ ವಿಸಿಗಳಿಗೆ ಕೇಳಿದ್ದಾರೆ.
ಕಾಲೇಜುಗಳಲ್ಲಿ ಚುನಾವಣೆ ನಡೆಸಲು ಬಹುತೇಕ ವಿಸಿಗಳು ವಿರೋಧ ವ್ಯಕ್ತ ಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಲೇಜುಗಳಲ್ಲಿ ಚುನಾವಣೆ ಬೇಡ ಎಂದ ವಿಸಿಗಳು, ವಿದ್ಯಾರ್ಥಿ ಚುನಾವಣೆಯಿಂದಾಗಿ ಜೆ ಎನ್ ಯು ಸೇರಿ ಹಲವೆಡೆ ಗಲಾಟೆ ನಡೆಯುತ್ತಿವೆ. ಈಗ ಪಕ್ಷಾತೀತವಾಗಿ ಚುನಾವಣೆಗಳು ನಡೆಯುವುದು ಕಷ್ಟ. ಚುನಾವಣೆಯಾದರೆ ಕ್ಯಾಂಪೇನ್ಗೆ ಬಹಳ ಸಮಯ ಬೇಕಾಗುತ್ತದೆ. ಹಾಗಾಗಿ ಸ್ಟೂಡೆಂಟ್ ಎಲೆಕ್ಷನ್ ಬೇಡ ಎಂದು ಕುಲಪತಿಗಳು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

