HomeKarnatakaಬೆಂಗಳೂರಲ್ಲಿ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆ; KMFಗೆ ಮಹಿಳೆ ದೂರು!

ಬೆಂಗಳೂರಲ್ಲಿ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆ; KMFಗೆ ಮಹಿಳೆ ದೂರು!

ಬೆಂಗಳೂರು: ಮನೆಯವರ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅದರಲ್ಲೂ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿದಿನ ಸೇವಿಸುವ ಹಾಲಿನ ವಿಚಾರದಲ್ಲಿ ಹೆಚ್ಚು ಜಾಗರೂಕತೆ ವಹಿಸುತ್ತಾರೆ. ಆದರೆ, ಗುಣಮಟ್ಟದ ಭರವಸೆಯೊಂದಿಗೆ ಖರೀದಿಸಿದ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲೇ ಸತ್ತ ಜೇಡ ಪತ್ತೆಯಾದರೆ ಹೇಗಾಗಬೇಡ? ಬೆಂಗಳೂರಿನ ಮಹಿಳೆಯೊಬ್ಬರಿಗೆ ಇಂತಹ ಆಘಾತಕಾರಿ ಅನುಭವವಾಗಿದ್ದು, ಹಾಲು ಕಾಯಿಸಲು ಪಾತ್ರೆಗೆ ಸುರಿದಾಗ ಸಣ್ಣ ಸತ್ತ ಜೇಡವೊಂದು ಕಾಣಿಸಿಕೊಂಡಿದೆ. ಈ ಘಟನೆ ಗ್ರಾಹಕರಲ್ಲಿ ಆತಂಕ ಮೂಡಿಸಿದ್ದು, ನಂದಿನಿ ಹಾಲಿನ ಗುಣಮಟ್ಟದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಹಾಲು ಕಾಯಿಸಲು ಹೋದಾಗ ಕಂಡಿದ್ದೇನು?

ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಹೋದರಿಯ ಮೊಮ್ಮಗಳಾದ ನಾಗೂರ್ ರೋಜಾ ಎಂಬುವವರು ಈ ಘಟನೆ ಕುರಿತು ದೂರು ನೀಡಿದ್ದಾರೆ. ಭಾನುವಾರ ಫ್ರಿಡ್ಜ್‌ನಲ್ಲಿಟ್ಟಿದ್ದ 500 ಮಿಲಿ ನಂದಿನಿ ಹಸುವಿನ ಹಾಲಿನ ಪ್ಯಾಕೆಟ್ ತೆರೆದು ಪಾತ್ರೆಗೆ ಸುರಿದು ಕಾಯಿಸಲು ಮುಂದಾಗಿದ್ದರು. ಈ ವೇಳೆ ಹಾಲಿನೊಂದಿಗೆ ಸಣ್ಣ ಸತ್ತ ಜೇಡವೊಂದು ಹೊರಬಂದಿದೆ. ಇದನ್ನು ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ.

ಕಳೆದ ಸುಮಾರು 20 ವರ್ಷಗಳಿಂದ ತಮ್ಮ ಕುಟುಂಬ ನಂದಿನಿ ಹಾಲು ಹಾಗೂ ಕೆಎಂಎಫ್‌ನ ಇತರ ಉತ್ಪನ್ನಗಳನ್ನು ಖರೀದಿಸುತ್ತಿದೆ. ಇಷ್ಟು ವರ್ಷಗಳ ನಂಬಿಕೆಯಿಂದ ಖರೀದಿಸುತ್ತಿದ್ದ ಹಾಲಿನಲ್ಲೇ ಇಂತಹ ವಸ್ತು ಪತ್ತೆಯಾಗಿರುವುದು ಬೇಸರ ತಂದಿದೆ ಎಂದು ರೋಜಾ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ಯಾಕೆಟ್ ತೊಳೆದಿಟ್ಟಿದ್ದರೂ ಜೇಡ ಪತ್ತೆ!

ಹಾಲಿನ ಪ್ಯಾಕೆಟ್‌ಗಳನ್ನು ಮಾರಾಟಗಾರರಿಂದ ಮುಚ್ಚಿದ ಬಾಕ್ಸ್‌ನಲ್ಲಿ ಪಡೆಯಲಾಗುತ್ತದೆ. ಮನೆಗೆ ತಂದ ಬಳಿಕ ಹರಿಯುವ ನೀರಿನಲ್ಲಿ ತೊಳೆದು ಫ್ರಿಡ್ಜ್‌ನಲ್ಲಿ ಇಡುವುದು ತಮ್ಮ ಕುಟುಂಬದ ಸಾಮಾನ್ಯ ಕ್ರಮವಾಗಿದೆ. ಈ ಬಾರಿಯೂ ಅದೇ ರೀತಿ ಮಾಡಿದ್ದಾಗಿ ಅವರು ಹೇಳಿದ್ದಾರೆ.

ಜೇಡ ಪತ್ತೆಯಾದ ಕೂಡಲೇ ಅದರ ವಿಡಿಯೋ ಚಿತ್ರೀಕರಿಸಿ ಹಾಲಿನ ಮಾರಾಟಗಾರರಿಗೆ ಕಳುಹಿಸಿದ್ದಾರೆ. ಪ್ಯಾಕೆಟ್‌ನಲ್ಲಿರುವ ಹಾಲನ್ನು ಎಸೆಯುವಂತೆ ಮಾರಾಟಗಾರರು ಸಲಹೆ ನೀಡಿದ್ದಾರೆ. ಆದರೆ, ಆಹಾರ ಉತ್ಪನ್ನದಲ್ಲಿ ಹೊರಗಿನ ವಸ್ತು ಪತ್ತೆಯಾಗಿರುವುದು ಗಂಭೀರ ವಿಚಾರ ಎಂದು ಪರಿಗಣಿಸಿದ ರೋಜಾ, ಸುಮ್ಮನಾಗದೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಕೆಎಂಎಫ್‌ಗೆ ಇಮೇಲ್ ಮೂಲಕ ದೂರು

ಈ ಘಟನೆ ಕುರಿತು ಕೆಎಂಎಫ್‌ನ ಮದರ್ ಡೈರಿ ಘಟಕದ ಮಾರ್ಕೆಟಿಂಗ್ ವ್ಯವಸ್ಥಾಪಕರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 26, 27 ಮತ್ತು 54ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮನೆಗೆ ಬಂದ ಅಧಿಕಾರಿಗಳು; ಹಾಲಿನ ಮಾದರಿ ಸಂಗ್ರಹ

ದೂರು ನೀಡಿದ ಬೆನ್ನಲ್ಲೇ ಸೋಮವಾರ ಇಬ್ಬರು ಕೆಎಂಎಫ್ ಅಧಿಕಾರಿಗಳು ರೋಜಾ ಅವರ ಮನೆಗೆ ಭೇಟಿ ನೀಡಿದ್ದಾರೆ. ಹಾಲಿನ ಮಾದರಿ ಹಾಗೂ ಪ್ಯಾಕೆಟ್‌ಗಳನ್ನು ಪರಿಶೀಲನೆಗಾಗಿ ಸಂಗ್ರಹಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಿ, ಹಾಲನ್ನು ಪ್ಯಾಕ್ ಮಾಡಿದ ಘಟಕವನ್ನು ಪತ್ತೆಹಚ್ಚುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ರೋಜಾ ಹೇಳಿದ್ದಾರೆ.

ಸದ್ಯ ಈ ಆರೋಪದ ಕುರಿತು ಪರಿಶೀಲನೆ ನಡೆಯಬೇಕಿದೆ. ತನಿಖೆಯ ವರದಿ ಹೊರಬಂದ ಬಳಿಕವಷ್ಟೇ ಹಾಲಿನ ಪ್ಯಾಕೆಟ್‌ನಲ್ಲಿ ಜೇಡ ಪತ್ತೆಯಾಗಿರುವುದರ ಹಿಂದಿನ ನಿಖರ ಕಾರಣ ತಿಳಿಯಲಿದೆ. ಹಲವು ವರ್ಷಗಳಿಂದ ನಂಬಿಕೆಯಿಂದ ಬಳಸುತ್ತಿದ್ದ ಉತ್ಪನ್ನದ ಬಗ್ಗೆ ಇಂತಹ ದೂರು ಕೇಳಿಬಂದಿರುವುದು ಗ್ರಾಹಕರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular