ನಿನ್ನೆ ( ಫೆಬ್ರವರಿ 16 ) ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಟೂರ್ನಿಯ ಗ್ರೂಪ್ ಹಂತದ 30ನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 8 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.
ಈ ಮೂಲಕ ಶ್ರೀಲಂಕಾ ಟೂರ್ನಿಯಲ್ಲಿ ಇಲ್ಲಿಯರೆಗೂ ಆಡಿದ ಎಲ್ಲ ಮೂರು ಪಂದ್ಯಗಳಲ್ಲಿಯೂ ಗೆದ್ದಿರುವ ಶ್ರೀಲಂಕಾ ಗ್ರೂಪ್ ‘ಬಿ’ನಿಂದ ಸೂಪರ್ 8 ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಅತ್ತ ಎ ಗುಂಪಿನಿಂದ ಭಾರತ, ಸಿ ಗುಂಪಿನಿಂದ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಮತ್ತು ಡಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಆಯ್ಕೆಯಾಗಿದ್ದು, ಬಿ ಗುಂಪಿನಿಂದ ಸೂಪರ್ 8 ಪ್ರವೇಶಿಸುವ ಎರಡನೇ ತಂಡ ಯಾವುದು ಎಂಬ ಪ್ರಶ್ನೆ ಇದೀಗ ಎದ್ದಿದೆ.
ಟೂರ್ನಿಯಲ್ಲಿ ಇಲ್ಲಿಯವರೆಗೆ ಮೂರು ಪಂದ್ಯಗಳನ್ನಾಡಿ ಕೇವಲ ಒಂದರಲ್ಲಿ ಮಾತ್ರ ಗೆದ್ದು ಉಳಿದ ಎರಡರಲ್ಲಿ ಸೋತಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಎರಡು ಪಂದ್ಯಗಳನ್ನಾಡಿ ಎರಡರಲ್ಲಿಯೂ ಗೆದ್ದಿರುವ ಜಿಂಬಾಬ್ವೆ ಎರಡನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವ ಲಂಕಾ ಆಗಲೇ ಸೂಪರ್ 8 ತಲುಪಿದೆ.
ಹೀಗೆ ಬಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಜಿಂಬಾಬ್ವೆ ಇಂದು ( ಫೆಬ್ರವರಿ 17 ) ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಗ್ರೂಪ್ ಹಂತದ 32ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದ್ದು, ಈ ಪಂದ್ಯದಲ್ಲೇನಾದರೂ ಜಿಂಬಾಬ್ವೆ ಗೆದ್ದರೆ ಅಂಕಪಟ್ಟಿಯಲ್ಲಿ 6 ಅಂಕಗಳನ್ನು ಪಡೆಯುವ ಮೂಲಕ ನೇರವಾಗಿ ಸೂಪರ್ 8 ತಲುಪಲಿದೆ. ಸದ್ಯ 2 ಅಂಕಗಳನ್ನು ಮಾತ್ರ ಹೊಂದಿರುವ ಆಸ್ಟ್ರೇಲಿಯಾಗೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಇದ್ದು, ಅದನ್ನೂ ಗೆದ್ದರೆ ಒಟ್ಟು 4 ಅಂಕಗಳಾಗಲಿವೆ.
ಹೀಗಾಗಿ ಇಂದಿನ ಹಣಾಹಣಿಯಲ್ಲಿ ಜಿಂಬಾಬ್ವೆ ಗೆದ್ದು, ಐರ್ಲೆಂಡ್ ಸೋತರೆ ಬಲಿಷ್ಠ ಆಸ್ಟ್ರೇಲಿಯಾ ಗ್ರೂಪ್ ಹಂತದಿಂದಲೇ ಟೂರ್ನಿಯಿಂದ ಹೊರಬಿದ್ದು ಭಾರೀ ಮುಖಭಂಗ ಅನುಭವಿಸಲಿದೆ.

