ಬೆಂಗಳೂರು: ಸಂಸ್ಕೃತ, ಹಿಂದುತ್ವವನ್ನು ನಿಂದಿಸಿ ಅರಣ್ಯಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದು, ಅಧಿಕಾರಿಯ ವಿರುದ್ಧ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಣಿಯೂರು ಉಪ ವಲಯ ಅರಣ್ಯ ಅಧಿಕಾರಿ ಎಂದು ಹೇಳಿಕೊಂಡಿರುವ ಸಂಜೀವ್ ಪೂಜಾರಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಭಾರಿ ಚರ್ಚೆಗೆ ಕಾರಣವಗಿದೆ.
ಸಂಸ್ಕೃತ ಭಾಷೆ, ಹಿಂದುತ್ವ ಹಾಗೂ ಸಂಘ ಪರಿವಾರವನ್ನು ಗುರಿಯಾಗಿಸಿಕೊಂಡು ಸಂಜೀವ್ ಪೂಜಾರಿ ಬರೆದಿರುವ ಬರಹಗಳು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಸರ್ಕಾರಿ ಅಧಿಕಾರಿಯೊಬ್ಬರ ಈ ನಡವಳಿಕೆ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಸಂಜೀವ್ ಪೂಜಾರಿ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಬರಹಗಳನ್ನು ಪೋಸ್ಟ್ ಮಾಡಲಾಗಿದೆ. ಆಗಸ್ಟ್ 30ನೇ ತಾರೀಕಿನಂದು “ಸುಳ್ಳನ್ನು ಯಾರಿಗೂ ಅರ್ಥವಾಗದಂತೆ ಕಿವಿಗೆ ಇಂಪಾಗಿ ಕೇಳಿಸುವ ಶ್ಲೋಕ ಮತ್ತು ಮಂತ್ರದ ಭಾಷೆಯೇ ಸಂಸ್ಕೃತ” ಎಂದು ಬರೆದು ಈ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅದಲ್ಲದೆ “ಹಿಂದುತ್ವ ಅನ್ನುವುದು ಮನೆಯಲ್ಲಿ ವಿಷವಿದ್ದಂತೆ” ಹಾಗೂ “ಸಂಘ ಪರಿವಾರಕ್ಕೆ ಸೇರಿದರೆ ಸಂಸಾರ ಹಾಳಾಗುತ್ತದೆ” ಎಂದು ಆಕ್ಷೇಪಾರ್ಹವಾಗಿ ನಿರಂತರವಾಗಿ ಪೋಸ್ಟ್ ಮಾಡಲಾಗುತ್ತಿದೆ. ಇದರ ಜೊತೆಗೆ ಸನಾತನ ಧರ್ಮ, ಮೂರ್ತಿ ಪೂಜೆ, ಜಾತಿ ಪದ್ಧತಿ ಹಾಗೂ ಕರ್ಮ ಸಿದ್ಧಾಂತಗಳ ಕುರಿತು ಪ್ರಚೋದನಾತ್ಮಕ ಹೇಳಿಕೆಗಳನ್ನು ಹಂಚಿಕೊಳ್ಳಲಾಗಿದೆ.
ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಸೇವೆಯಲ್ಲಿದ್ದುಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಒಂದು ನಿರ್ದಿಷ್ಟ ಸಿದ್ಧಾಂತ ಹಾಗೂ ಭಾಷೆಯನ್ನು ನಿಂದಿಸುವ ಅಧಿಕಾರ ಯಾರಿಗೂ ಇಲ್ಲ. ಸಂಜೀವ್ ಪೂಜಾರಿ ಎಂಬ ಈ ವ್ಯಕ್ತಿ ನಿಜವಾಗಿಯೂ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದರೆ, ಸರ್ಕಾರಿ ನೌಕರರ ಸೇವಾ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಇವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

