HomeKarnatakaಸ್ಟಿಂಗ್ ಆಪರೇಷನ್ ಪ್ರಕರಣದ ಸತ್ಯಾಂಶ 3–4 ದಿನ ಅಥವಾ ವಾರದೊಳಗೆ ಬಹಿರಂಗ: ಗೃಹ ಸಚಿವ ಪ್ರಿಯಾಂಕ್...

ಸ್ಟಿಂಗ್ ಆಪರೇಷನ್ ಪ್ರಕರಣದ ಸತ್ಯಾಂಶ 3–4 ದಿನ ಅಥವಾ ವಾರದೊಳಗೆ ಬಹಿರಂಗ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಶೇ.70ರಿಂದ 80ರಷ್ಟು ಪೂರ್ಣಗೊಂಡಿದ್ದು, ಇನ್ನು 3–4 ದಿನಗಳಲ್ಲಿ ಅಥವಾ ಒಂದು ವಾರದೊಳಗೆ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬೀಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು, ಅದರ ಹಿಂದಿನ ಉದ್ದೇಶವೇನು, ಎಲ್ಲಿ ಕಾರ್ಯಾಚರಣೆ ನಡೆಸಲಾಯಿತು, ಯಾರ ಪ್ರೋತ್ಸಾಹ ಮತ್ತು ಬೆಂಬಲವಿತ್ತು ಹಾಗೂ ವಿಡಿಯೋವನ್ನು ಎಲ್ಲಿಂದ ಅಪ್‌ಲೋಡ್ ಮಾಡಲಾಯಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಪ್ರಕರಣದ ಕುರಿತು ಈಗಾಗಲೇ ಹಲವು ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗಿದೆ. ಹಿರಿಯ ಮತ್ತು ಕಿರಿಯ ಪತ್ರಕರ್ತರನ್ನು ವಿಚಾರಣೆಗೆ ಕರೆಯಲಾಗಿದ್ದು, ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಚಾರಣೆಯ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದ್ದು, ಅದರ ವರದಿಗಳು ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ ಎಂದು ವಿವರಿಸಿದರು.

ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ

ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ

ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಮೊದಲಿನಿಂದಲೂ ಕಟ್ಟುಕಥೆ ಮತ್ತು ನಕಲಿ ಪ್ರಕರಣ ಎಂದು ಹೇಳುತ್ತ ಬಂದಿದ್ದೇನೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ನನ್ನ ಬಳಿ ಇವೆ. ಅಗತ್ಯವಿದ್ದಾಗ ಅವುಗಳನ್ನು ಪುರಾವೆಗಳೊಂದಿಗೆ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದರು.

ಪ್ರಕರಣದ ಪ್ರತಿಯೊಂದು ಹಂತವನ್ನೂ ಸಾರ್ವಜನಿಕವಾಗಿ ತಕ್ಷಣವೇ ಬಹಿರಂಗಪಡಿಸಲು ಸಾಧ್ಯವಿಲ್ಲ. ತನಿಖೆಯನ್ನು ಬಿಗ್‌ಬಾಸ್ ಕಾರ್ಯಕ್ರಮದಂತೆ 24 ಗಂಟೆಗಳ ಕಾಲ ನೇರಪ್ರಸಾರ ಮಾಡಲು ಆಗುವುದಿಲ್ಲ. ತನಿಖೆಯ ವಿವರಗಳನ್ನು ಈಗಲೇ ಬಹಿರಂಗಪಡಿಸುವುದರಿಂದ ತನಿಖೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಕಾನೂನು ಪ್ರಕ್ರಿಯೆ, ನ್ಯಾಯಾಲಯ ಅಥವಾ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದಾಗ ನಿಯಮಾನುಸಾರ ದಾಖಲೆಗಳನ್ನು ಒದಗಿಸಲಾಗುತ್ತದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ನಮಗೆ ನೀಡಿದ್ದಾರೆ. ಸರ್ಕಾರದ ಘನತೆ ಮತ್ತು ಸಿದ್ದರಾಮಯ್ಯ ಅವರ ಗೌರವದ ವಿಚಾರವೂ ಮಹತ್ವದ್ದಾಗಿದೆ. ಆದರೂ, ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ವರ್ಚಸ್ಸಿಗೆ ಹಾನಿಯಾಗಿದ್ದರೂ ತನಿಖೆಯನ್ನು ನ್ಯಾಯಸಮ್ಮತವಾಗಿ ನಡೆಸಲಾಗುತ್ತದೆ ಎಂದು ಹೇಳಿದರು.

ಎಸ್‌ಐಟಿ ಅಥವಾ ನ್ಯಾಯಾಂಗ ತನಿಖೆಯ ಅಗತ್ಯವಿಲ್ಲ

*ಎಸ್‌ಐಟಿ ಅಥವಾ ನ್ಯಾಯಾಂಗ ತನಿಖೆಯ ಅಗತ್ಯವಿಲ್ಲ*

ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಬೇಕು ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ತಳ್ಳಿಹಾಕಿದ ಪ್ರಿಯಾಂಕ್ ಖರ್ಗೆ, ಗೃಹ ಇಲಾಖೆಯ ಅಧಿಕಾರಿಗಳು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಎಸ್‌ಐಟಿ ಅಥವಾ ಸಿಐಡಿ ತನಿಖೆ ನಡೆಸಿದರೂ ಅಧಿಕಾರಿಗಳು ನಮ್ಮ ಇಲಾಖೆಯವರೇ ಆಗಿರುತ್ತಾರೆ. ನಮ್ಮ ತನಿಖಾಧಿಕಾರಿಗಳು ಅನುಭವಿಗಳು ಮತ್ತು ಸಮರ್ಥರಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತನಿಖೆಯ ದಿಕ್ಕನ್ನು ನಿರ್ಧರಿಸುವುದು ಅಧಿಕಾರಿಗಳ ಜವಾಬ್ದಾರಿ. ರಾಜಕೀಯ ನಾಯಕರ ಆರೋಪಗಳನ್ನು ಆಧರಿಸಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು

*ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು*

ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಿರಂತರವಾಗಿ ಆರೋಪ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಆರೋಪ ಮಾಡುವವರು ತನಿಖೆಗೆ ಸಹಕರಿಸಬೇಕು ಎಂದು ಹೇಳಿದರು.

ನೋಟಿಸ್ ನೀಡಲಾದ ಕೆಲವು ವ್ಯಕ್ತಿಗಳು ವಿಚಾರಣೆಗೆ ಹಾಜರಾಗಿಲ್ಲ. ಮರೆಮಾಚಲು ಏನೂ ಇಲ್ಲದಿದ್ದರೆ ವಿಚಾರಣೆಯಿಂದ ದೂರ ಉಳಿಯುವುದೇಕೆ? ಸಂಬಂಧಪಟ್ಟ ವ್ಯಕ್ತಿಗಳಿಗೆ ಕುಮಾರಸ್ವಾಮಿ ರಕ್ಷಣೆ ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು.

ಕುಮಾರಸ್ವಾಮಿ ಅವರ ಆರೋಪಗಳಿಗಿಂತ ತನಿಖೆಯಲ್ಲಿ ಸಂಗ್ರಹವಾಗುವ ಸಾಕ್ಷ್ಯಗಳು ಮುಖ್ಯ. ತನಿಖೆಯ ಸಂಪೂರ್ಣ ವಿವರಗಳು ಹೊರಬಂದ ಬಳಿಕ ಯಾರು ಸತ್ಯ ಹೇಳುತ್ತಿದ್ದಾರೆ ಎಂಬುದು ರಾಜ್ಯದ ಜನರಿಗೆ ತಿಳಿಯಲಿದೆ ಎಂದು ಹೇಳಿದರು.

ಬಿಜೆಪಿ ಆಡಳಿತಾವಧಿಯ ಬಿಟ್‌ಕಾಯಿನ್ ಪ್ರಕರಣ ಮತ್ತು ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಗಳ ತನಿಖೆಯ ರೀತಿಯನ್ನೂ ಪ್ರಸ್ತಾಪಿಸಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ತನಿಖೆಗಳು ಹೇಗೆ ನಡೆದಿದ್ದವು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ವಿರುಧ್ದ ಸ್ಟಿಂಗ್‌ನಿಂದ ಪಕ್ಷಕ್ಕೆ ಮುಜುಗರ

*ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ನಿಂದ ಪಕ್ಷಕ್ಕೆ ಮುಜುಗರ*

ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರು. ಅವರ ಸಿದ್ಧಾಂತ ಮತ್ತು ಆಡಳಿತದ ಆಲೋಚನೆಗಳಿಂದ ಪ್ರೇರಿತರಾಗಿ ಲಕ್ಷಾಂತರ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಅವರ ಚಿಂತನೆಗಳ ಆಧಾರದಲ್ಲಿ ರೂಪಿಸಲಾದ ಹಲವು ಜನಪರ ಯೋಜನೆಗಳು ಕುಟುಂಬಗಳಿಗೆ ಆರ್ಥಿಕ ಸ್ಥಿರತೆ ಮತ್ತು ಸ್ವಾಭಿಮಾನದ ಬದುಕು ಕಲ್ಪಿಸಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಇಂತಹ ನಾಯಕರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿರುವುದು ಪಕ್ಷಕ್ಕೆ ಮುಜುಗರ ತಂದಿದೆ. ಸಿದ್ದರಾಮಯ್ಯ ಅವರು ಅನೇಕ ನಾಯಕರಿಗೆ ಅವಕಾಶಗಳನ್ನು ಕಲ್ಪಿಸಿದ್ದಾರೆ. ಅವರ ಬಗ್ಗೆ ಕಾಳಜಿ ಮತ್ತು ಗೌರವವನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಆಂತರಿಕ ರಾಜಕೀಯ ಹಾಗೂ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಈ ಪ್ರಕರಣದೊಂದಿಗೆ ಬೆರೆಸಬಾರದು ಎಂದು ಅಭಿಪ್ರಾಯಪಟ್ಟರು.

ವರದಿ ಕೇಳಲಾಗಿದೆ

*ವರದಿ ಕೇಳಲಾಗಿದೆ*

ಮೈಸೂರು ದಸರಾ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ವರ್ತನೆ ಕುರಿತು ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿರುವ ವಿಚಾರಕ್ಕೂ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ ಅವರು,

ಈ ಸಂಬಂಧ ಒಂದೆರಡು ದೂರುಗಳು ಬಂದಿವೆ. ದಸರಾ ಸಂದರ್ಭದಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ಆಕಸ್ಮಿಕವಾಗಿ ಲಾಠಿ ಬಿದ್ದ ಘಟನೆ ಕುರಿತು ವರದಿ ಕೇಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೊಲೀಸ್ ಆಯುಕ್ತರು ಮಗುವಿನ ಕುಟುಂಬವನ್ನು ಭೇಟಿ ಮಾಡಿ ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ದಸರಾ ಕಾರ್ಯಕ್ರಮದಲ್ಲಿ ಸಚಿವರಿಗೆ ಶಿಷ್ಟಾಚಾರದ ಪ್ರಕಾರ ಅವಕಾಶ ನೀಡದಿರುವ ಆರೋಪದ ಬಗ್ಗೆಯೂ ಮುಖ್ಯ ಕಾರ್ಯದರ್ಶಿ ಮಾಹಿತಿ ಕೇಳಿದ್ದಾರೆ. ಈ ಕುರಿತು ಸಂಪೂರ್ಣ ತನಿಖೆ ನಡೆಸಿ ವಿವರಣೆ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಪೊಲೀಸ್ ಸಿಬ್ಬಂದಿಯಿಂದ ಲೋಪವಾಗಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶಿಷ್ಟಾಚಾರದಲ್ಲಿ ಲೋಪವಾಗಿದ್ದರೆ ಸಚಿವರಾಗಲಿ, ಶಾಸಕರಾಗಲಿ ಅಥವಾ ಸಾರ್ವಜನಿಕರಾಗಲಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಟೀಕೆಗಳಿಗೆ ವೈಯಕ್ತಿಕ ತಿರುಗೇಟು

ಟೀಕೆಗಳಿಗೆ ವೈಯಕ್ತಿಕ ತಿರುಗೇಟು

ತಾವು ಹುಟ್ಟುತ್ತಲೇ ಸೂಟುಬೂಟು ಧರಿಸಿ ಬೆಳೆದವರು ಎಂಬ ಮಾಜಿ ಶಾಸಕ ಅನ್ನದಾನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ತಮ್ಮ ತಂದೆ ಕಷ್ಟಪಟ್ಟು ಓದಿಸಿದ್ದು, ತಾವು ಕಾನ್ವೆಂಟ್‌ನಲ್ಲಿ ಓದಿಲ್ಲ, ಅದಮಾರು ಮಠದ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ ಎಂದು ಹೇಳಿದರು.

ತಮ್ಮ ಮಕ್ಕಳಿಗೂ ಕಷ್ಟಪಟ್ಟು ಶಿಕ್ಷಣ ನೀಡುತ್ತಿರುವುದಾಗಿ ತಿಳಿಸಿದ ಅವರು, ಅನ್ನದಾನಿ ಅವರು ಪ್ರತಾಪ್ ಸಿಂಹ ಅವರ ಪ್ರಭಾವಕ್ಕೆ ಒಳಗಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಆರೋಪಗಳ ಹಿನ್ನೆಲೆಯಲ್ಲಿ ಅನ್ನದಾನಿ ಮತ್ತು ಅಶ್ವಿನ್ ಅವರು ತಮ್ಮ ರಾಜಕೀಯ ಭವಿಷ್ಯಕ್ಕೆ ಹಾನಿಯಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದೂ ಸಲಹೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular