ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಯುವಜನತೆ ಮಾಡುತ್ತಿರುವ ಸಾಹಸಗಳು ದಿನದಿಂದ ದಿನಕ್ಕೆ ಗಂಭೀರ ಅನಾಹುತಗಳಿಗೆ ದಾರಿಮಾಡಿಕೊಡುತ್ತಿವೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಲತಾಗುರಿ ಹಾಗೂ ಚಲ್ಸಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರೀಲ್ಸ್ ಚಿತ್ರೀಕರಣದ ಹುಚ್ಚಾಟಕ್ಕೆ ಇಬ್ಬರು ಯುವಕರು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ವರದಿಯಾಗಿದೆ.
ಮೃತರನ್ನು ರೋಹಿತ್ ಮೊಹಮ್ಮದ್ ಮತ್ತು ಆಲಿಫ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಕಾಡಿನ ಮಾರ್ಗದ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಅತಿ ವೇಗವಾಗಿ ಚಲಿಸುತ್ತಾ ಸಾಮಾಜಿಕ ಜಾಲತಾಣದ ವೀಡಿಯೋ ರೀಲ್ಸ್ ಶೂಟ್ ಮಾಡುತ್ತಿದ್ದಾಗ, ಎದುರಿನಿಂದ ಬರುತ್ತಿದ್ದ ಸ್ಕೂಟರ್‌ಗೆ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಯುವಕರು ಹಾಗೂ ಸ್ಕೂಟರ್‌ನಲ್ಲಿದ್ದ ಸಮೀರ್ ಬಸು ಮತ್ತು ಪ್ರಿಯಾಂಕಾ ಸಿದ್ಧಾ ಬಸು ದಂಪತಿ ರಸ್ತೆಗೆ ಬಿದ್ದಿದ್ದಾರೆ.
ಸ್ಥಳೀಯರು ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಬೈಕ್ ಸವಾರರು ಅಂತಿಮ ಉಸಿರೆಳೆದಿದ್ದಾರೆ. ಸ್ಕೂಟರ್‌ನಲ್ಲಿದ್ದ ದಂಪತಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆಯಲ್ಲಿ ಇಂತಹ ನಿರ್ಲಕ್ಷ್ಯದ ಚಾಲನೆ ಮತ್ತು ಸಾಹಸದ ವೀಡಿಯೋಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಘಟನೆ ನಡೆದ ಲತಾಗುರಿ ಪ್ರದೇಶವು ಅರಣ್ಯ ವಲಯದಿಂದ ಕೂಡಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ಹೆಚ್ಚಾಗಿ ಸಂಚರಿಸುವ ಹಾದಿಯಾಗಿದೆ. ಅಪಘಾತದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವೇಗ ನಿಯಂತ್ರಣ ಮತ್ತು ಕಟ್ಟುನಿಟ್ಟಿನ ಸಂಚಾರ ನಿಯಮಗಳ ಜಾರಿಗೆ ಆಗ್ರಹ ಕೇಳಿಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
“>

