ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ನೀಡಿದ್ದ ಶಿಕ್ಷೆಯನ್ನು ಸಂವಿಧಾನದ 142ನೇ ವಿಧಿ ನೀಡಿದ ವಿಶೇಷ ಅಧಿಕಾರ ಬಳಕೆ ಮಾಡಿಕೊಂಡು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಕೆಳ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿ ಹಿಡಿದಿದ್ದ ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಪರಾಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ಆದೇಶ ನೀಡಿದೆ.
ಸಂತ್ರಸ್ತೆ ಮತ್ತು ಅಪರಾಧಿ ಮದುವೆಯಾಗಿದ್ದಾರೆ. ಒಟ್ಟಿಗೆ ಸಂಸಾರ ಮಾಡುತ್ತಿದ್ದಾರೆ. ಮುಂದೆ ಜತೆಗೆ ಬಾಳುವ ನಿರ್ಧಾರ ಕೈಗೊಂಡಿದ್ದಾರೆ. ಒಂದು ಅಪರೂಪದ ಪ್ರಕರಣವೆಂದು ಪರಿಗಣಿಸಿ ಅಪರಾಧಿಗೆ ನೀಡಿದ ಶಿಕ್ಷೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಮೇಲ್ಮನವಿ ಸಲ್ಲಿಸಿದ್ದ ವ್ಯಕ್ತಿ ಮತ್ತು ಸಂತ್ರಸ್ತೆಯ ಪೋಷಕರ ಜೊತೆ ಮಾತುಕತೆ ನಡೆಸಲಾಗಿದೆ. ಕಳೆದ ಜುಲೈನಲ್ಲಿ ಮದುವೆಯಾಗಿರುವ ಅಪರಾಧಿ ಹಾಗೂ ಸಂತ್ರಸ್ತೆ ಜೊತೆಗೆ ಬಾಳುವ ನಿರ್ಧಾರ ಕೈಗೊಂಡಿದ್ದಾರೆ. ಈ ಹಂತದಲ್ಲಿ ಸಂತ್ರಸ್ತೆಗೆ ಸಂಪೂರ್ಣ ನ್ಯಾಯ ಕಲ್ಪಿಸಲು ಸಂವಿಧಾನದ 142ನೇ ವಿಧಿ ನೀಡಿದ ಅಧಿಕಾರ ಬಳಕೆ ಮಾಡಿಕೊಂಡು ಶಿಕ್ಷೆ ರದ್ದುಪಡಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಇಬ್ಬರ ನಡುವೆ ಪರಸ್ಪರ ಒಪ್ಪಿತ ಸಂಬಂಧವಿದೆ. ಈ ತಪ್ಪು ತಿಳಿವಳಿಕೆಯಿಂದ ಸಂಬಂಧಕ್ಕೆ ಕ್ರಿಮಿನಲ್ ಬಣ್ಣ ನೀಡಲಾಗಿದೆ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ದೂರುದಾರೆ ಮತ್ತು ಅಪರಾಧಿ ವಿವಾಹವಾಗಿರುವುದನ್ನು ಗಮನಿಸಿದ ನ್ಯಾಯ ಪೀಠ ಈ ಪ್ರಕರಣ ಹೀಗೆ ತಿರುವು ಪಡೆಯುತ್ತದೆ ಎಂಬುದನ್ನು ನಾವು ಊಹಿಸಿದ್ದೆವು ಎಂದು ಹೇಳಿದೆ.
ಸಂವಿಧಾನದ 142ನೇ ವಿಧಿಯ ಅನ್ವಯ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಒದಗಿಸಲು ಅರ್ಜಿದಾರರ ವಿರುದ್ಧದ ಎಲ್ಲಾ ಶಿಕ್ಷೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಡಿಸೆಂಬರ್ 5 ರಂದು ಪ್ರಕರಣದ ಅಂತಿಮ ತೀರ್ಪು ಹೊರಡಿಸಿದ ನ್ಯಾಯಪೀಠ ತಿಳಿಸಿದೆ.

