ಬೆಂಗಳೂರು: ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಕ್ಕೆ ಎರಡನೇ ಸ್ಟ್ರೇ ವೇಕೆನ್ಸಿ ಸುತ್ತಿನ ನಂತರ ಉಳಿದಿರುವ 7 ಹಾಗೂ ರದ್ದುಪಡಿಸಿಕೊಂಡಿರುವ ಒಂದು, ಒಟ್ಟು 8 ಸೀಟುಗಳಿಗೆ ಡಿ.29ರಂದು ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ನಡೆಸಲಾಗುತ್ತದೆ.
ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ 5 ಹಾಗೂ ಕಲ್ಬುರ್ಗಿಯ ಎಂಆರ್ ಎಂಸಿ ವೈದ್ಯಕೀಯ ಕಾಲೇಜಿನಲ್ಲಿ 2 ಸೀಟು ಉಳಿದಿವೆ. ಇದರ ಜತೆಗೆ ಧಾರವಾಡದ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಒಬ್ಬ ಅಭ್ಯರ್ಥಿ ಅನಾರೋಗ್ಯದ ಕಾರಣಕ್ಕೆ ಪ್ರವೇಶ ರದ್ದುಪಡಿಸಿಕೊಂಡಿದ್ದು, ಆ ಸೀಟ ಅನ್ನೂ ಈ ಸುತ್ತಿನಲ್ಲಿ ಹಂಚಿಕೆಗೆ ಪರಿಗಣಿಸಲಾಗಿದೆ.
ಆಸಕ್ತ ಅರ್ಹರು ನಿಗದಿತ ಕೋರ್ಸ್ ಶುಲ್ಕದಷ್ಟು ಡಿ.ಡಿ ಕೊಟ್ಟು ಈ ಸುತ್ತಿನ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಬಹುದು.
ಮೂರೂ ಕಾಲೇಜುಗಳಲ್ಲಿ ಅದರ್ಸ್ ಕೋಟಾ ದಲ್ಲಿ ಸೀಟುಗಳು ಲಭ್ಯ ಇದ್ದು, ಆಸಕ್ತರು ನಿಗದಿತ ಶುಲ್ಕದ ಡಿ.ಡಿ (ಎಂವಿಜೆ ಕಾಲೇಜಿಗೆ ₹40,11,950, ಎಂಆರ್ ಎಂಸಿ ಕಾಲೇಜಿಗೆ ₹39,11,950, ಧಾರವಾಡದ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿಗೆ ₹35,15,000) ಹಾಗೂ ಮೂಲ ದಾಖಲೆಗಳ ಸಮೇತ ಡಿ.29ರಂದು ಮಧ್ಯಾಹ್ನ 12 ಗಂಟೆಯೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ಕಚೇರಿಯಲ್ಲಿ ಹಾಜರಾಗಬೇಕು. ಬಳಿಕ ಮಧ್ಯಾಹ್ನ 1ಗಂಟೆವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಬಳಿಕ ಡಿ.30ರೊಳಗೆ ಕಾಲೇಜಿಗೆ ಪ್ರವೇಶ ನೀಡಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

