2015ರಲ್ಲಿ ತಿಂಗಳಿಗೆ ಕೇವಲ ₹37 ಸಾವಿರ ಸಂಬಳದೊಂದಿಗೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ವೃತ್ತಿಜೀವನ ಆರಂಭಿಸಿದ ಟೆಕ್ ವೃತ್ತಿಪರರೊಬ್ಬರು, ನಿರಂತರ ಪರಿಶ್ರಮ, ಕೌಶಲ್ಯಾಭಿವೃದ್ಧಿ ಹಾಗೂ ಧೈರ್ಯಶಾಲಿ ವೃತ್ತಿ ನಿರ್ಧಾರಗಳ ಮೂಲಕ ಕೇವಲ 11 ವರ್ಷಗಳಲ್ಲಿ ವಾರ್ಷಿಕ ₹2.2 ಕೋಟಿ ಪ್ಯಾಕೇಜ್ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ಹಲವು ಬಾರಿ ಉದ್ಯೋಗ ಬದಲಾವಣೆ ಹಾಗೂ ಸವಾಲುಗಳನ್ನು ಎದುರಿಸಿದರೂ ಹಿಂಜರಿಯದೆ ಮುನ್ನಡೆದ ಅವರ ಯಶೋಗಾಥೆ ಇದೀಗ ಯುವಕರಿಗೆ ಸ್ಫೂರ್ತಿಯಾಗಿದೆ.
ಹೌದು 2015ರಲ್ಲಿ ತಿಂಗಳಿಗೆ ಕೇವಲ ₹37,000 ಸಂಬಳದೊಂದಿಗೆ ಸರ್ವಿಸ್ ಮತ್ತು ಕನ್ಸಲ್ಟಿಂಗ್ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ವೃತ್ತಿಜೀವನ ಆರಂಭಿಸಿದ ಟೆಕ್ ವೃತ್ತಿಪರರೊಬ್ಬರು, ಇಂದು ₹2.2 ಕೋಟಿಯ ಭರ್ಜರಿ ಪ್ಯಾಕೇಜ್ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ಈ ಸಾಧನೆ ಅನೇಕರಿಗೆ ಮಾದರಿಯಾಗಿದೆ.
ಅವರ ವಿದ್ಯಾಭ್ಯಾಸವೂ ಪ್ರತಿಷ್ಠಿತ ಕಾಲೇಜುಗಳಲ್ಲಿ ನಡೆದಿರಲಿಲ್ಲ. ಶ್ರೀಮಂತ ಕುಟುಂಬದ ಹಿನ್ನೆಲೆಯೂ ಇರಲಿಲ್ಲ. ಆದರೆ ಸ್ವಯಂ ಪ್ರಯತ್ನ, ನಿರಂತರ ಪರಿಶ್ರಮ ಮತ್ತು ಸರಿಯಾದ ನಿರ್ಧಾರಗಳ ಮೂಲಕ ಕೇವಲ 11 ವರ್ಷಗಳಲ್ಲೇ ಈ ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೊದಲ ಕಂಪನಿಯಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡುತ್ತಾ ತಮ್ಮ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡ ಅವರು, ತಿಂಗಳಿಗೆ ₹1.1 ಲಕ್ಷ ಸಂಬಳ ಪಡೆಯುವ ಹಂತಕ್ಕೆ ತಲುಪಿದ್ದರು. ಆದರೂ ಕಂಫರ್ಟ್ ಝೋನ್‌ನಲ್ಲೇ ಉಳಿಯದೆ ಹೊಸ ಸವಾಲುಗಳನ್ನು ಎದುರಿಸಲು ಮುಂದಾದರು. ಇದರ ಭಾಗವಾಗಿ 2019ರಲ್ಲಿ ಪ್ರತಿಷ್ಠಿತ FAANG ಕಂಪನಿಯೊಂದರಲ್ಲಿ ವಾರ್ಷಿಕ ₹44 ಲಕ್ಷ ಪ್ಯಾಕೇಜ್‌ನೊಂದಿಗೆ ಉದ್ಯೋಗ ಪಡೆದರು.
ಆದರೆ ಕೊರೋನಾ ಸಮಯದಲ್ಲಿ ಹೆಚ್ಚಿದ ಕೆಲಸದ ಒತ್ತಡ ಮತ್ತು ಮಾನಸಿಕ ಆತಂಕದಿಂದಾಗಿ, 2020ರಲ್ಲಿ ಕೈಯಲ್ಲಿ ಮತ್ತೊಂದು ಉದ್ಯೋಗವಿಲ್ಲದಿದ್ದರೂ ಧೈರ್ಯವಾಗಿ ಆ ಕೆಲಸಕ್ಕೆ ರಾಜೀನಾಮೆ ನೀಡಿದರು. ಬಳಿಕ ಅಮೆರಿಕದ ರಿಯಲ್ ಎಸ್ಟೇಟ್ ಸ್ಟಾರ್ಟ್‌ಅಪ್‌ವೊಂದಕ್ಕೆ ಸೇರಿದರು. ತಮ್ಮ ಪ್ರತಿಭೆಯಿಂದ ಕೇವಲ ಎಂಟು ತಿಂಗಳಲ್ಲೇ ಬಡ್ತಿ ಪಡೆದು, ತಮ್ಮ ವೇತನವನ್ನು ₹70 ಲಕ್ಷಕ್ಕೆ ಹೆಚ್ಚಿಸಿಕೊಂಡರು.
ನಂತರ ಫಿನ್‌ಟೆಕ್ ಸ್ಟಾರ್ಟ್‌ಅಪ್‌ವೊಂದರಲ್ಲಿ ಸಿಟಿಒ ಆಗಿ ಜವಾಬ್ದಾರಿ ವಹಿಸಿಕೊಂಡು ಉದ್ಯಮದ ಅನುಭವವನ್ನೂ ಪಡೆದರು. ಆದರೆ ನಿಯಮಗಳು ಮತ್ತು ಲೈಸೆನ್ಸ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಆ ವ್ಯವಹಾರದಿಂದ ಹೊರಬರಬೇಕಾಯಿತು.
2024ರಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ವೊಂದರಲ್ಲಿ ₹1.2 ಕೋಟಿ ಪ್ಯಾಕೇಜ್‌ನ ಉದ್ಯೋಗ ದೊರೆತರೂ, ಅಲ್ಲಿನ ವಿಷಕಾರಿ ಕೆಲಸದ ವಾತಾವರಣ ಇಷ್ಟವಾಗದ ಕಾರಣ ಕೇವಲ ಮೂರು ತಿಂಗಳಲ್ಲೇ ಹೊರಬಂದರು.
ಕೊನೆಗೆ ಫೆಬ್ರವರಿ 2025ರಲ್ಲಿ ಮತ್ತೊಂದು FAANG ಕಂಪನಿಗೆ ₹1.5 ಕೋಟಿ ಪ್ಯಾಕೇಜ್‌ನೊಂದಿಗೆ ಸೇರಿದರು. ಮಾರ್ಚ್ 2026ರ ವೇಳೆಗೆ ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಬಡ್ತಿ ಪಡೆದು, ಕಂಪನಿಯ ಷೇರುಗಳನ್ನು ಒಳಗೊಂಡಂತೆ ವಾರ್ಷಿಕ ₹2.2 ಕೋಟಿ ಪ್ಯಾಕೇಜ್ ಪಡೆಯುವ ಮಟ್ಟಕ್ಕೆ ಏರಿದರು.
ವೃತ್ತಿಜೀವನದಲ್ಲಿ ಹಲವು ಸವಾಲುಗಳು, ಉದ್ಯೋಗ ಬದಲಾವಣೆಗಳು ಎದುರಾದರೂ ಯಾವುದಕ್ಕೂ ಹೆದರದೆ ಮುನ್ನಡೆದ ಈ ಟೆಕ್ ವೃತ್ತಿಪರರ ಯಶೋಗಾಥೆ ಇಂದಿನ ಯುವಕರಿಗೆ ನಿಜಕ್ಕೂ ದೊಡ್ಡ ಸ್ಫೂರ್ತಿಯಾಗಿದೆ.

