ಅಯೋಧ್ಯೆ ರಾಮಮಂದಿರದ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ದೇಣಿಗೆ ಕಳವು ಆರೋಪದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (SIT) ಕ್ಲೀನ್‌ಚಿಟ್ ನೀಡಿದೆ ಎಂದು ವರದಿಯಾಗಿದೆ. ರಾಮಮಂದಿರ ಟ್ರಸ್ಟ್‌ನ ಮಾಜಿ ಸದಸ್ಯ ಅನಿಲ್ ಮಿಶ್ರಾ ಅವರಿಗೂ SIT ಕ್ಲೀನ್‌ಚಿಟ್ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ದೇಣಿಗೆ ಕಳವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಮಮಂದಿರವನ್ನು ನಿರ್ವಹಿಸುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿದ್ದ ತಮ್ಮ ಸ್ಥಾನಗಳಿಗೆ ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಇಬ್ಬರೂ ಜೂನ್ 27ರಂದು ರಾಜೀನಾಮೆ ನೀಡಿದ್ದರು.
ತನಿಖೆಯ ಅಂತಿಮ ವರದಿ ಸಲ್ಲಿಕೆ
ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸಿದ ವಿಶೇಷ ತನಿಖಾ ತಂಡದ ಅಂತಿಮ ವರದಿಯನ್ನು ಉತ್ತರ ಪ್ರದೇಶ ಗೃಹ ಇಲಾಖೆ ಸೋಮವಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಲ್ಲಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹಾಗೂ ಮಾಜಿ ಖಜಾಂಚಿ ಗೋವಿಂದ್ ದೇವ್ ಗಿರಿಯವರ ಸಹಾಯಕ ಅನಿಲ್ ಮಿಶ್ರಾ ಅವರನ್ನು SIT ವಿಚಾರಣೆ ನಡೆಸಿತ್ತು.
ಆರೋಪ ನಿರಾಕರಿಸಿದ್ದ ಚಂಪತ್ ರೈ
ವಿಚಾರಣೆ ವೇಳೆ ಚಂಪತ್ ರೈ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು. ದೇಣಿಗೆ ಅಕ್ರಮದ ಬಗ್ಗೆ ತಾವೇ ದೂರು ನೀಡಿದ್ದು, ಅದೇ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ.
ದೇಣಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳುವುದು ತಮ್ಮ ಜವಾಬ್ದಾರಿಯ ಭಾಗವಾಗಿತ್ತು. ಅಕ್ರಮದ ಬಗ್ಗೆ ಮಾಹಿತಿ ದೊರೆತ ತಕ್ಷಣ ತಾವು ಕ್ರಮ ಕೈಗೊಂಡಿದ್ದಾಗಿ ಚಂಪತ್ ರೈ ಹೇಳಿದ್ದರು ಎಂದು ವರದಿಯಾಗಿದೆ.
ಜೂನ್ 13ರಂದು SIT ರಚನೆ
ದೇವಾಲಯದ ಟ್ರಸ್ಟ್ ಮನವಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಜೂನ್ 13ರಂದು ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಲಖನೌ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಅವರು ತಂಡದ ನೇತೃತ್ವ ವಹಿಸಿದ್ದರು. ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಕಿರಣ್ ಎಸ್. ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಕುಮಾರ್ ತಂಡದ ಇತರ ಸದಸ್ಯರಾಗಿದ್ದರು.
SIT ಜೂನ್ 23ರಂದು ತನ್ನ ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ದೇಣಿಗೆ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಹಲವು ಶಿಫಾರಸುಗಳನ್ನು ಮಾಡಿತ್ತು.
ಇದಾದ ಬಳಿಕ ಟ್ರಸ್ಟ್ ಸದಸ್ಯ ಕೃಷ್ಣಮೋಹನ್ ಅವರು ಶ್ರೀ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದರು. ಜೂನ್ 25ರಂದು ಈ ಕುರಿತು ಎಫ್‌ಐಆರ್ ದಾಖಲಿಸಲಾಗಿತ್ತು.
ಜೂನ್‌ನಲ್ಲಿ ಬೆಳಕಿಗೆ ಬಂದಿತ್ತು ದೇಣಿಗೆ ವಿವಾದ
ಅಯೋಧ್ಯೆ ರಾಮಮಂದಿರಕ್ಕೆ ಬಂದ ದೇಣಿಗೆಯ ಎಣಿಕೆಯಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂಬ ಆರೋಪಗಳು ಜೂನ್ ಆರಂಭದಲ್ಲಿ ವಿವಾದಕ್ಕೆ ಕಾರಣವಾಗಿದ್ದವು.
ಟ್ರಸ್ಟ್‌ನ ಶಿಫಾರಸಿನ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಲು SIT ರಚಿಸಿತ್ತು. ತನಿಖೆಯ ವೇಳೆ ಹಣ ದುರುಪಯೋಗವಾಗಿರುವ ಬಗ್ಗೆ ಪ್ರಾಥಮಿಕ ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.
ಈ ಪ್ರಕರಣದಲ್ಲಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಸೇರಿದಂತೆ ಎಂಟು ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು. ಜೊತೆಗೆ ಗುರುತಿಸಲಾಗದ ಕೆಲವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಈ ಎಂಟು ಮಂದಿಯನ್ನೂ ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
SITಯ ಪ್ರಾಥಮಿಕ ವರದಿಯ ಆಧಾರದ ಮೇಲೆ ದೇಣಿಗೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ಮುಂದಿನ ಎಫ್‌ಐಆರ್‌ಗಳು ಮತ್ತು ಬಂಧನಗಳು ನಡೆದಿದ್ದವು.

