ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿ, ಸೋದರ ಸಂಬಂಧಿ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಶಾಸಕ ಆದರೆ ಈತ ಬೆಂಗಳೂರು ನಗರದಲ್ಲಿ ಲ್ಯಾಪ್‌ಟಾಪ್ ಕದಿಯುತ್ತಿದ್ದ ಕಳ್ಳ. ಹೌದು ಇದು 30 ವರ್ಷದ ಗೌತಮ್ ಕಥೆ. ಮೊದಲು ದುಬೈನಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿನ ಪಿಜಿಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರು ತಮಿಳುನಾಡು ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ಗೌತಮ್ (30) ಮತ್ತು ಆಟೋ ಚಾಲಕ ರಾಜಾದೊರೈ (33) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ 40 ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿದೆ. ಇಬ್ಬರ ವಿರುದ್ಧ ತಮಿಳುನಾಡಿನ ಪೊಲೀಸ್ ಠಾಣೆಗಳಲ್ಲಿ ಸಹ ಪ್ರಕರಣಗಳು ದಾಖಲಾಗಿವೆ. ಗೌತಮ್ ಬಂಧಿಸಲು ಹೋದಾಗ ಡಿಎಂಕೆ ಶಾಸಕರು ಬೆಂಬಲಿಗರು ಪೊಲೀಸರಿಗೆ ಅಡ್ಡಿಪಡಿಸಿದ ಘಟನೆ ಸಹ ನಡೆದಿದೆ.
ಆರೋಪಿ ಗೌತಮ್: ಬಂಧಿತ ಆರೋಪಿ ಗೌತಮ್ ಕೆಲವು ದಿನಗಳ ಹಿಂದೆ ದೊಡ್ಡ ತೋಗೂರಿನ ಅಬ್ಬಯ್ಯ ಸ್ಟ್ರೀಟ್ ಪಿಜಿಯಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿದ ಪ್ರಕರಣದಲ್ಲಿ ಆರೋಪಿ. ಈತ ಮೂಲತಃ ತಮಿಳುನಾಡಿನವನು. ಮೊದಲು ದುಬೈನಲ್ಲಿ ಡಾಟಾ ವಿಶ್ಲೇಷಕನಾಗಿ ಕೆಲಸ ಮಾಡುತ್ತಿದ್ದ.
ಗೌತಮ್ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿ. ಸೋದರ ಸಂಬಂಧಿ ಉದಯ್ ಸೂರ್ಯ ಶಂಕರಪುರ ಕ್ಷೇತ್ರದ ಡಿಎಂಕೆ ಪಕ್ಷದ ಶಾಸಕ. ಡಿಪ್ಲೋಮಾ ಓದಿದ್ದ ಗೌತಮ್ ಹಲವು ವರ್ಷ ದುಬೈನಲ್ಲಿದ್ದ, ತಮಿಳುನಾಡಿಗೆ ವಾಪಸ್ ಆದ ಬಳಿಕ ಕಳ್ಳತನ ಪ್ರಾರಂಭಿಸಿದ್ದ.
ಪಿಜಿಗಳನ್ನು ಗುರಿತಿಸಿ ಅಲ್ಲಿಗೆ ಉದ್ಯೋಗಿಯಂತೆಯೇ ಬಟ್ಟೆಗಳನ್ನು ತೊಟ್ಟು ಎಂಟ್ರಿ ಕೊಡುತ್ತಿದ್ದ. ರಾತ್ರಿ ಶಿಫ್ಟ್ ಮುಗಿಸಿ ಬಂದು ಮಲಗುವ ಉದ್ಯೋಗಿಗಳನ್ನು ಗುರುತಿಸಿ ಅವರ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ. ಅದನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ.
ಗೌತಮ್ ಕೃತ್ಯಕ್ಕೆ ಆಟೋ ಚಾಲಕ ರಾಜಾದೊರೈ ಸಾಥ್ ನೀಡುತ್ತಿದ್ದ. ಸೋದರ ಸಂಬಂಧಿ ಶಾಸಕನಾದ ಕಾರಣ ಗೌತಮ್ ಸ್ಥಳೀಯವಾಗಿ ಪ್ರಭಾವ ಹೊಂದಿದ್ದ. ತಮಿಳುನಾಡಿನಲ್ಲಿಯೂ ಈತನ ವಿರುದ್ಧ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಗೌತಮ್ ಬಂಧಿಸಲು ಹೋದಾಗ ಶಾಸಕ ಉದಯ್ ಸೂರ್ಯ ಬೆಂಬಲಿಗರು ಅಡ್ಡಿ ಪಡಿಸಿದ್ದರು. ಆದರೆ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿ ಬೆಂಗಳೂರು ನಗರಕ್ಕೆ ಕರೆತಂದಿದ್ದಾರೆ.
ಇನ್ಸ್‌ಪೆಕ್ಟರ್ ಎಂ.ಜಿ.ನವೀನ್ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ಅಂಶಗಳ ಆಧಾರದ ಮೇಲೆ ಗೌತಮ್ ಮತ್ತು ರಾಜಾದೊರೈ ಪತ್ತೆ ಹಚ್ಚಿದ್ದರು. ಬಳಿಕ ಅವರು ತಮಿಳುನಾಡಿನಲ್ಲಿ ಇರುವ ಮಾಹಿತಿ ತಿಳಿದು ಅಲ್ಲಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
2025ರ ನವೆಂಬರ್ 28, ಡಿಸೆಂಬರ್ 1ರಂದು ಬೆಂಗಳೂರು ನಗರದ ಪಿಜಿಗಳಲ್ಲಿ ನಡೆದ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣದಲ್ಲಿ ಇಬ್ಬರು ಸಹ ಆರೋಪಿಗಳು. ಆರೋಪಿಗಳ ಬಳಿ ಸುಮಾರು 40 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ಗಳಿದ್ದವು ಎಂದು ಪೊಲೀಸರು ಹೇಳಿದ್ದಾರೆ.

