ಆರೋಗ್ಯ ಚಿಕಿತ್ಸೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ದೊಡ್ಡ ಆಸರೆಯಾಗಿದೆ. ಇದೀಗ ಈ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಮತ್ತೊಂದು ಅನುಕೂಲ ಕಲ್ಪಿಸಿದೆ. ಇನ್ನು ಮುಂದೆ ವಾಟ್ಸ್‌ಆ್ಯಪ್‌ನಲ್ಲಿ ಒಂದೇ ಒಂದು ‘Hi’ ಎಂದು ಸಂದೇಶ ಕಳುಹಿಸುವ ಮೂಲಕ ಆಯುಷ್ಮಾನ್ ಕಾರ್ಡ್‌ಗೆ ಸಂಬಂಧಿಸಿದ ಹಲವು ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯಬಹುದು.
ಹೌದು, ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲದೆ ವಾಟ್ಸ್‌ಆ್ಯಪ್ ಚಾಟ್‌ಬಾಟ್ ಮೂಲಕ ಯೋಜನೆಯ ಅರ್ಹತೆ ಪರಿಶೀಲನೆ, ಇ-ಕೆವೈಸಿ ಪ್ರಕ್ರಿಯೆ ಹಾಗೂ ಆಯುಷ್ಮಾನ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಲಾಗಿದೆ.
ವಾಟ್ಸ್‌ಆ್ಯಪ್ ಮೂಲಕ ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಅಭಿವೃದ್ಧಿಪಡಿಸಿರುವ ಆಯುಷ್ಮಾನ್ ಸಾರಥಿ-PM-JAY ವಾಟ್ಸ್‌ಆ್ಯಪ್ ಚಾಟ್‌ಬಾಟ್ ಮೂಲಕ ಈ ಸೇವೆ ಲಭ್ಯವಿದೆ.
ಕಾರ್ಡ್ ಪಡೆಯಲು ಈ ಸರಳ ಹಂತಗಳನ್ನು ಅನುಸರಿಸಿ:
-
ಮೊದಲು ನಿಮ್ಮ ಮೊಬೈಲ್‌ನಲ್ಲಿ +91 72908 23838 ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ.
-
ವಾಟ್ಸ್‌ಆ್ಯಪ್ ತೆರೆಯಿರಿ ಮತ್ತು ಆ ಸಂಖ್ಯೆಗೆ ‘Hi’ ಎಂದು ಮೆಸೇಜ್ ಕಳುಹಿಸಿ.
-
ಚಾಟ್‌ಬಾಟ್‌ನಿಂದ ಬರುವ ಆಯ್ಕೆಗಳಲ್ಲಿ ಆಯುಷ್ಮಾನ್ ಕಾರ್ಡ್ ಸೇವೆಯನ್ನು ಆಯ್ಕೆಮಾಡಿ.
-
ಯೋಜನೆಗೆ ನೀವು ಅರ್ಹರೇ ಎಂಬುದನ್ನು ಪರಿಶೀಲಿಸಲು ಕೇಳುವ ಅಗತ್ಯ ಮಾಹಿತಿಯನ್ನು ನಮೂದಿಸಿ.
-
ಅರ್ಹತೆ ಇದ್ದರೆ ಸೂಚನೆಯಂತೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
-
ನಿಮ್ಮ ವಿವರಗಳ ಪರಿಶೀಲನೆ ಮತ್ತು ಅರ್ಜಿ ಅನುಮೋದನೆಯಾದ ಬಳಿಕ ಆಯುಷ್ಮಾನ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ಸೇವೆ ದಿನದ 24 ಗಂಟೆಯೂ, ವಾರದ ಏಳು ದಿನವೂ ಲಭ್ಯವಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಾಟ್ಸ್‌ಆ್ಯಪ್‌ನಲ್ಲೇ ಸಿಗಲಿವೆ ಈ 12 ಸೇವೆಗಳು!
ಆಯುಷ್ಮಾನ್ ಚಾಟ್‌ಬಾಟ್ ಕೇವಲ ಹೊಸ ಕಾರ್ಡ್ ಪಡೆಯಲು ಮಾತ್ರವಲ್ಲದೆ ಹಲವು ಉಪಯುಕ್ತ ಸೇವೆಗಳನ್ನು ಒದಗಿಸುತ್ತದೆ.
-
PM-JAY ಯೋಜನೆಗೆ ಅರ್ಹತೆ ಪರಿಶೀಲನೆ.
-
ಈಗಾಗಲೇ ಇರುವ ಆಯುಷ್ಮಾನ್ ಕಾರ್ಡ್ ವಿವರ ವೀಕ್ಷಣೆ.
-
ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಕೆ.
-
ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು.
-
ಆಧಾರ್ ಲಿಂಕ್ ಮಾಡುವುದು.
-
ಕಾರ್ಡ್ ಲಾಕ್ ಅಥವಾ ಅನ್‌ಲಾಕ್ ಮಾಡುವುದು.
-
ಕಾರ್ಡ್ ವಾಲೆಟ್ ಬ್ಯಾಲೆನ್ಸ್ ಪರಿಶೀಲನೆ.
-
ಹಿಂದಿನ ವೈದ್ಯಕೀಯ ಚಿಕಿತ್ಸೆಗಳ ವಿವರ ಪಡೆಯುವುದು.
-
ಹತ್ತಿರದ ನೋಂದಾಯಿತ ಆಸ್ಪತ್ರೆಗಳ ಮಾಹಿತಿ ಪಡೆಯುವುದು.
-
ದೂರು ದಾಖಲಿಸುವುದು ಮತ್ತು ದೂರಿನ ಸ್ಥಿತಿ ಪರಿಶೀಲನೆ.
-
ದಾಖಲಿಸಿದ ದೂರನ್ನು ಹಿಂಪಡೆಯುವುದು.
-
ಅಗತ್ಯವಿದ್ದಲ್ಲಿ ಮರು ಕರೆ ಮಾಡುವಂತೆ ಮನವಿ ಸಲ್ಲಿಸುವುದು.
ಇದರ ಜೊತೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತಮ್ಮ ಅನುಭವದ ಕುರಿತು ಅಭಿಪ್ರಾಯವನ್ನೂ ಹಂಚಿಕೊಳ್ಳಬಹುದು.
70 ವರ್ಷ ಮೇಲ್ಪಟ್ಟವರಿಗೂ ವಿಶೇಷ ಸೌಲಭ್ಯ
70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರ ಆಯುಷ್ಮಾನ್ ವಯ ವಂದನಾ ಕಾರ್ಡ್ ಸೌಲಭ್ಯವನ್ನೂ ಒದಗಿಸಿದೆ. ಆದಾಯದ ಮಿತಿಯನ್ನು ಲೆಕ್ಕಿಸದೆ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಈ ಸೌಲಭ್ಯಕ್ಕೂ ಸರ್ಕಾರದ ನಿಗದಿತ ಮಾರ್ಗಸೂಚಿಗಳು ಅನ್ವಯಿಸುತ್ತವೆ.
ಆಯುಷ್ಮಾನ್ ಭಾರತ್ ಯೋಜನೆಯಿಂದ ಏನು ಪ್ರಯೋಜನ?
ಕೇಂದ್ರ ಸರ್ಕಾರವು 2018ರ ಸೆಪ್ಟೆಂಬರ್ 23ರಂದು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಆರಂಭಿಸಿತು.
ಈ ಯೋಜನೆಯಡಿ ಅರ್ಹ ಕುಟುಂಬಗಳಿಗೆ ವರ್ಷಕ್ಕೆ ₹5 ಲಕ್ಷದವರೆಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ದೊರೆಯುತ್ತದೆ.
ದೇಶಾದ್ಯಂತ ಯೋಜನೆಯಡಿ ನೋಂದಾಯಿತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ದ್ವಿತೀಯ ಮತ್ತು ತೃತೀಯ ಹಂತದ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದು. ದುಬಾರಿ ಚಿಕಿತ್ಸೆಯಿಂದ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಾಲದ ಸುಳಿಗೆ ಸಿಲುಕುವುದನ್ನು ತಡೆಯುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಯಾರಿಗೆ ಸಿಗಲಿದೆ ಆಯುಷ್ಮಾನ್ ಕಾರ್ಡ್?
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (SECC) 2011ರ ಆಧಾರದ ಮೇಲೆ ಗುರುತಿಸಲಾದ ಅರ್ಹ ಕುಟುಂಬಗಳು ಪ್ರಮುಖವಾಗಿ ಈ ಯೋಜನೆಯ ಫಲಾನುಭವಿಗಳಾಗಿವೆ.
ಅರ್ಹ ಫಲಾನುಭವಿಗಳಲ್ಲಿ ಪ್ರಮುಖವಾಗಿ:
-
ಭೂಮಿ ಇಲ್ಲದ ಕೃಷಿ ಕಾರ್ಮಿಕರು.
-
ಮನೆಗೆಲಸ ಮಾಡುವ ಕಾರ್ಮಿಕರು.
-
ಬೀದಿ ಬದಿ ವ್ಯಾಪಾರಿಗಳು.
-
ಕಟ್ಟಡ ನಿರ್ಮಾಣ ಕಾರ್ಮಿಕರು.
-
ಪೌರಕಾರ್ಮಿಕರು.
-
ಚಾಲಕರು ಮತ್ತು ಟೈಲರ್‌ಗಳು.
-
ಅಸಂಘಟಿತ ವಲಯದ ಇತರ ಕಾರ್ಮಿಕರು.
ಇದರ ಜೊತೆಗೆ ಸರ್ಕಾರ ಗುರುತಿಸಿರುವ ಇತರ ಅರ್ಹ ವರ್ಗಗಳಿಗೂ ಯೋಜನೆಯ ಪ್ರಯೋಜನ ದೊರೆಯಲಿದೆ.
ವಾಟ್ಸ್‌ಆ್ಯಪ್‌ನಲ್ಲಿ ಕೇವಲ ‘Hi’ ಎಂದು ಮೆಸೇಜ್ ಕಳುಹಿಸಿದ ತಕ್ಷಣ ಆಯುಷ್ಮಾನ್ ಕಾರ್ಡ್ ಸಿಗುವುದಿಲ್ಲ. ಮೊದಲು ನಿಮ್ಮ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. ನಂತರ ಇ-ಕೆವೈಸಿ ಸೇರಿದಂತೆ ಅಗತ್ಯ ದೃಢೀಕರಣ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಅರ್ಜಿ ಅನುಮೋದನೆಯಾದ ಬಳಿಕವಷ್ಟೇ ಕಾರ್ಡ್ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.
ಗಮನಿಸಿ: ವಾಟ್ಸ್‌ಆ್ಯಪ್‌ನಲ್ಲಿ ವೈಯಕ್ತಿಕ ಅಥವಾ ಆಧಾರ್ ಮಾಹಿತಿಯನ್ನು ನೀಡುವ ಮೊದಲು ಅಧಿಕೃತ ಸಂಖ್ಯೆಯನ್ನೇ ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾವುದೇ ಅಪರಿಚಿತ ಲಿಂಕ್‌ಗಳನ್ನು ತೆರೆಯಬೇಡಿ.

