ನವದೆಹಲಿ: ನಟಿ ದಿವಂಗತ ಶ್ರೀದೇವಿ ಖರೀದಿಸಿದ್ದ ಚೆನ್ನೈನ 2.7 ಎಕರೆ ಭೂಮಿಗೆ ಸಂಬಂಧಿಸಿದ ದೀರ್ಘಕಾಲದ ಆಸ್ತಿ ವಿವಾದವನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ ಕಳುಹಿಸಿದೆ. ಚಿತ್ರ ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿಯರಾದ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅರುಣ್ ಪಳ್ಳಿ ಅವರ ಪೀಠವು, ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಪಕ್ಷಗಳಿಗೆ ಸೂಚಿಸಿದೆ.
ಹೌದು. ಶ್ರೀದೇವಿ ಖರೀದಿಸಿದ್ದ ಚೆನ್ನೈನ 2.7 ಎಕರೆ ಭೂಮಿಗೆ ಸಂಬಂಧಿಸಿದ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಬೋನಿ ಕಪೂರ್, ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಅವರ ಕುಟುಂಬಕ್ಕೆ ಸಂಬಂಧಿಸಿದ ಈ ಆಸ್ತಿ ವಿವಾದವನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ ಕಳುಹಿಸಿದೆ. ಎರಡೂ ಪಕ್ಷಗಳು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸುವಂತೆ ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅರುಣ್ ಪಳ್ಳಿ ಅವರ ಪೀಠ ಸೂಚಿಸಿದೆ
ಚೆನ್ನೈನ ಶೋಲಿಂಗನಲ್ಲೂರಿನಲ್ಲಿರುವ 2.7 ಎಕರೆ ಜಮೀನನ್ನು ಶ್ರೀದೇವಿ ಅವರು ತಮ್ಮ ತಾಯಿ ಹಾಗೂ ಸಹೋದರಿಯೊಂದಿಗೆ ಸೇರಿ 1988ರ ಏಪ್ರಿಲ್‌ನಲ್ಲಿ ಖರೀದಿಸಿದ್ದರು. ಶ್ರೀದೇವಿ ನಿಧನದ ಬಳಿಕ 2023ರಲ್ಲಿ ಅವರ ಕಾನೂನುಬದ್ಧ ವಾರಸುದಾರರಾದ ಪತಿ ಬೋನಿ ಕಪೂರ್ ಹಾಗೂ ಪುತ್ರಿಯರಾದ ಜಾಹ್ನವಿ ಮತ್ತು ಖುಷಿ ಕಪೂರ್ ಅವರು ಆಸ್ತಿಯ ಪಹಣಿ/ಪಟ್ಟಾ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು.
ಈ ನಡುವೆ, ದಿವಂಗತ ಎಂ.ಸಿ. ಚಂದ್ರಶೇಖರನ್ ಅವರ ಮಕ್ಕಳಾಗಿರುವುದಾಗಿ ಹೇಳಿಕೊಂಡಿರುವ ಎಂ.ಸಿ. ಶಿವಕಾಮಿ ಮತ್ತಿತರರು 2025ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಸ್ತಿಯಲ್ಲಿ ತಮಗೆ ಐದನೇ ಒಂದು ಭಾಗದ ಹಕ್ಕು ಇದೆ ಎಂದು ಅವರು ವಾದಿಸಿದ್ದು, 1988ರಲ್ಲಿ ನಡೆದ ಮಾರಾಟ ಪತ್ರಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆಯಲ್ಲಿ ಬೋನಿ ಕಪೂರ್ ಕುಟುಂಬದ ಪರ ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರು, 1988ರ ಮಾರಾಟ ಪತ್ರಕ್ಕೆ ಸಂಬಂಧಿಸಿದ ಪ್ರಕರಣವನ್ನು ಇಷ್ಟು ವರ್ಷಗಳ ಬಳಿಕ ದಾಖಲಿಸಿರುವುದು ಕಾನೂನುಬದ್ಧ ಅವಧಿಯ ಮಿತಿಗೆ ಒಳಪಡುತ್ತದೆ ಎಂದು ವಾದಿಸಿದರು. ಶ್ರೀದೇವಿ ನಿಧನದ ಹಿನ್ನೆಲೆಯಲ್ಲಿ 2023ರಲ್ಲಿ ಪಟ್ಟಾ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದನ್ನೇ ಆಧಾರ ಮಾಡಿಕೊಂಡು ಈಗ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಯಾಗಿ, ಶಿವಕಾಮಿ ಪರ ಹಿರಿಯ ವಕೀಲ ರಾಜು ರಾಮಚಂದ್ರನ್ ಅವರು, ವಿಚಾರಣಾ ನ್ಯಾಯಾಲಯವು ಅರ್ಜಿಯನ್ನು ಆರಂಭಿಕ ಹಂತದಲ್ಲೇ ತಿರಸ್ಕರಿಸದೇ ಸರಿಯಾದ ಕ್ರಮ ಕೈಗೊಂಡಿತ್ತು. ಆದರೆ ಹೈಕೋರ್ಟ್ ಅರ್ಜಿಯ ವಿಚಾರಣೆ ವೇಳೆ ಪ್ರಕರಣದ ಅರ್ಹತೆಯ ಬಗ್ಗೆ ಸಣ್ಣ ಮಟ್ಟಿನ ವಿಚಾರಣೆ ನಡೆಸಿದೆ ಎಂದು ವಾದಿಸಿದರು.
ಎರಡೂ ಪಕ್ಷಗಳ ವಾದ ಆಲಿಸಿದ ಬಳಿಕ ಸುಪ್ರೀಂ ಕೋರ್ಟ್, ವಿವಾದವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿನ ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿತು. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಯನ್ನು ಮಧ್ಯಸ್ಥರಾಗಿ ನೇಮಿಸುವುದಾಗಿ ಪೀಠ ತಿಳಿಸಿದೆ.
ಮಧ್ಯಸ್ಥಿಕೆ ಪ್ರಕ್ರಿಯೆ ನಡೆಯುವವರೆಗೆ ವಿವಾದಿತ 2.7 ಎಕರೆ ಜಮೀನಿನ ಕುರಿತು ಯಥಾಸ್ಥಿತಿ (Status Quo) ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

