ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಇ-ಸ್ವತ್ತು 2.0 ತಂತ್ರಾಂಶದ ಮೂಲಕ ನಮೂನೆ-11ಎ ಹಾಗೂ ನಮೂನೆ-11ಬಿ ದಾಖಲೆಗಳನ್ನು ವಿತರಿಸಲು ‘ಇ-ಸ್ವತ್ತು ಅಭಿಯಾನ’ ಆರಂಭಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚಿಸಿದೆ. ಸೆಪ್ಟೆಂಬರ್ 21, 2026ರಿಂದ ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ಆರಂಭವಾಗಲಿದೆ.
ಭೂ-ಗ್ಯಾರಂಟಿ ಯೋಜನೆಯಡಿ ಗ್ರಾಮೀಣ ಭಾಗದ ನಾಗರಿಕರಿಗೆ ಸುರಕ್ಷಿತ, ನಿಖರ, ಡಿಜಿಟಲೀಕರಿಸಿದ ಹಾಗೂ ಭೌಗೋಳಿಕವಾಗಿ ಗುರುತಿಸಲಾದ ಭೂಮಿ ಮತ್ತು ಆಸ್ತಿ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗಿದೆ. ಈ ಕುರಿತು ಇಲಾಖೆ ಸೆಪ್ಟೆಂಬರ್ 15, 2026ರಂದು ಸುತ್ತೋಲೆ ಹೊರಡಿಸಿದೆ.
ಇ-ಸ್ವತ್ತು 2.0 ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಿಯಮಾನುಸಾರ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಆಸ್ತಿಯ ತೆರಿಗೆ ಪಾವತಿಸಿ ನಮೂನೆ-11ಎ ಅಥವಾ ನಮೂನೆ-11ಬಿ ಪಡೆಯಲು ಅವಕಾಶವಿದೆ.
ಗ್ರಾಮವಾರು, ವಾರ್ಡ್ವಾರು ಅರ್ಹ ಆಸ್ತಿಗಳ ಪಟ್ಟಿ
ಅಭಿಯಾನದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ ಕರ ನಿರ್ಧರಣಾ ಪಟ್ಟಿ ಅಥವಾ ಪಂಚತಂತ್ರ ತಂತ್ರಾಂಶದಲ್ಲಿರುವ ಆಸ್ತಿಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸಹಕಾರದಿಂದ ಗ್ರಾಮವಾರು ಹಾಗೂ ವಾರ್ಡ್ವಾರು ವಿಂಗಡಿಸಿ ಅರ್ಹ ಆಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು.
ಅಭಿಯಾನ ನಡೆಯುವ ಸ್ಥಳ, ಸಮಯ ಮತ್ತು ದಿನಾಂಕದ ವಿವರಗಳನ್ನು ಒಳಗೊಂಡ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ತಿಳಿಸಬೇಕು. ನಮೂನೆ ಪಡೆಯಲು ಅಗತ್ಯವಿರುವ ದಾಖಲೆಗಳ ಪಟ್ಟಿಯನ್ನೂ ಪ್ರಕಟಿಸಬೇಕು ಎಂದು ಇಲಾಖೆ ಸೂಚಿಸಿದೆ.
ಸ್ಥಳ ಪರಿಶೀಲನೆ, GPS ದಾಖಲೆ
ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ನಿಯಮಾನುಸಾರ ನೋಟಿಸ್ ನೀಡಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ನಂತರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸ್ಥಳ ಪರಿಶೀಲನೆ ನಡೆಸಿ ದಿಶಾಂಕ್ ತಂತ್ರಾಂಶದ ಮೂಲಕ ಆಸ್ತಿಯ ಛಾಯಾಚಿತ್ರ, GPS ಮಾಹಿತಿ, ಆಸ್ತಿಯ ಅಳತೆ ಸೇರಿದಂತೆ ಅಗತ್ಯ ವಿವರಗಳನ್ನು ದಾಖಲಿಸಬೇಕು.
ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಂತ್ರಾಂಶದ ಮೂಲಕ ಕಳುಹಿಸಲಾಗುತ್ತದೆ.
ಗ್ರಾಮ ಠಾಣಾ ಆಸ್ತಿಗಳಿಗೂ ಅವಕಾಶ
ಗ್ರಾಮ ಠಾಣಾ ವ್ಯಾಪ್ತಿಯ ಆಸ್ತಿಗಳಿಗೆ ಸಂಬಂಧಿಸಿದಂತೆ ದಿಶಾಂಕ್ ಆ್ಯಪ್ ಮೂಲಕ ಪರಿಶೀಲನೆ ನಡೆಸಿ, ನಿಯಮಾನುಸಾರ ಅಗತ್ಯ ಶುಲ್ಕಗಳನ್ನು ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಬಫರ್ ಪ್ರದೇಶಕ್ಕೆ ಸಂಬಂಧಿಸಿದ ಆಸ್ತಿಗಳಿಗೂ ನಿಯಮಾನುಸಾರ ಮೋಜಿಣಿ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು.
ಬಡಾವಣೆ, ಅಪಾರ್ಟ್ಮೆಂಟ್ಗಳಿಗೂ ನಮೂನೆ
ಅನುಮೋದಿತ ಬಡಾವಣೆಗಳು ಹಾಗೂ ಅಪಾರ್ಟ್ಮೆಂಟ್ಗಳ ಆಸ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಂತ್ರಾಂಶದಲ್ಲಿ Bulk Uploading ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ನಿಯಮಾನುಸಾರ ಅರ್ಹ ಆಸ್ತಿಗಳಿಗೆ ನಮೂನೆ-11ಎ ವಿತರಿಸಲು ಕ್ರಮ ಕೈಗೊಳ್ಳಬೇಕು.
ಅದೇ ರೀತಿ, ನಮೂನೆ-11ಎಗೆ ಸಂಬಂಧಿಸಿದ ಇತರೆ ವರ್ಗೀಕರಣದ ಆಸ್ತಿಗಳಿಗೂ ತಂತ್ರಾಂಶದ ಮೂಲಕ ದಾಖಲೆ ವಿತರಿಸಲು ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.
ಸಾರ್ವಜನಿಕರಿಗೆ ದಾಖಲೆ ಪಡೆಯಲು ಮತ್ತೊಂದು ಅವಕಾಶ
ನಿಗದಿತ ದಿನಾಂಕದಂದು ಸ್ಥಳದಲ್ಲಿಯೇ ನಮೂನೆ ಪಡೆಯಲು ಸಾಧ್ಯವಾಗದ ಸಾರ್ವಜನಿಕರಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ದಾಖಲೆಗಳನ್ನು ವಿತರಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಅಭಿಯಾನದ ಪ್ರಗತಿ ಮೇಲ್ವಿಚಾರಣೆಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ತಾಲ್ಲೂಕು ಮಟ್ಟದ ಒಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ಹಾಗೂ ಪ್ರತಿ ತಾಲ್ಲೂಕಿಗೆ ಜಿಲ್ಲಾ ಮಟ್ಟದ ಒಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸುವಂತೆ ಸೂಚಿಸಲಾಗಿದೆ.
ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿಯಾನದ ಸಂಪೂರ್ಣ ಮೇಲ್ವಿಚಾರಣೆ ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

