ಧರ್ಮಶಾಲಾ: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಸರಣಿಯನ್ನು 3 -0 ಅಂತರದಲ್ಲಿ ಜಯಿಸಿದ ಟೀಂ ಇಂಡಿಯಾ ಹ್ಯಾಟ್ರಿಕ್ ಸರಣಿ ವೈಟ್ ವಾಷ್ ಸಾಧನೆ ಮಾಡಿದೆ. ಕಿವೀಸ್ ಮತ್ತು ವಿಂಡೀಸ್ ನಂತರ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಿದೆ.
ಈ ಮೂಲಕ ಭಾರತ ದಾಖಲೆ ಬರೆದಿದೆ. ಟೆಸ್ಟ್ ಆಡುವ ದೇಶಗಳ ವಿರುದ್ಧ ಸತತ 3 ಸರಣಿ ವೈಟ್ ವಾಷ್ ಮಾಡಿದ ಮೊದಲ ತಂಡ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 3 -0 ಅಂತರದಿಂದ ಟಿ20 ಜಯಿಸಿದೆ.
ಇದರೊಂದಿಗೆ ಭಾರತ ಮತ್ತೊಂದು ದಾಖಲೆ ಬರೆದಿದೆ 12 ಟಿ20 ಪಂದ್ಯಗಳ ಗೆಲುವಿನ ದಾಖಲೆಯನ್ನು ಸರಿಗಟ್ಟಿದೆ. ಆಫ್ಘಾನಿಸ್ತಾನ ಮತ್ತು ರೊಮೇನಿಯಾ ತಂಡಗಳು ಸತತ 12 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದ್ದವು. ಭಾರತ ಈ ದಾಖಲೆ ಸರಿಗಟ್ಟಿದ್ದು, ಇನ್ನೊಂದು ಪಂದ್ಯದಲ್ಲಿ ಗೆದ್ದರೆ ವಿಶ್ವ ದಾಖಲೆಗೆ ಪಾತ್ರವಾಗಲಿದೆ.
ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದು, ಭಾರತ 16.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ ಗೆಲುವು ಕಂಡಿದೆ. ಶ್ರೇಯಸ್ ಅಯ್ಯರ್ ಅಜೇಯ 73 ರನ್ ಗಳಿಸಿದ್ದು, ಇದರೊಂದಿಗೆ ಹ್ಯಾಟ್ರಿಕ್ ಅರ್ಧ ಶತಕ ಗಳಿಸಿದ್ದಾರೆ.