alex Certify ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್: ಸರ್ಕಾರಿ ಉದ್ಯೋಗಾವಕಾಶ, ಕ್ರೀಡಾ ಇಲಾಖೆಯಲ್ಲಿ ಶೇ. 50, ಉಳಿದ ಇಲಾಖೆಗಳಲ್ಲಿ ಶೇ. 2 ರಷ್ಟು ಮೀಸಲಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್: ಸರ್ಕಾರಿ ಉದ್ಯೋಗಾವಕಾಶ, ಕ್ರೀಡಾ ಇಲಾಖೆಯಲ್ಲಿ ಶೇ. 50, ಉಳಿದ ಇಲಾಖೆಗಳಲ್ಲಿ ಶೇ. 2 ರಷ್ಟು ಮೀಸಲಾತಿ

ದಾವಣಗೆರೆ: ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಚಾಲನೆ ನೀಡಿದರು.

ಇದೇ ವೇಳೆ ದೇಶದಲ್ಲಿ 100 ಕೋಟಿ ಕೊರೋನಾ ಲಸಿಕೆ ನೀಡಿರುವ ಹಿನ್ನೆಲೆಯಲ್ಲಿ ಬಲೂನ್ ಹಾರಿ ಬಿಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.

ಬೆಣ್ಣೆನಗರಿ ದಾವಣಗೆರೆಯಲ್ಲಿ ಅದ್ಭುತವಾದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯುತ್ತಿರುವುದು ಸಂತೋಷ ತಂದಿದೆ. ಕ್ರೀಡಾ ಸಚಿವನಾಗಿ ನಾನು ಖುಷಿಪಡುತ್ತಿದ್ದೇನೆ. ಕ್ರೀಡಾ ಸಚಿವರಾಗಲು ಹಲವರು ಹಿಂದೇಟು ಹಾಕುತ್ತಿದ್ದರು. ನಾನು ಆತ್ಮಪೂರ್ವಕವಾಗಿ ಕ್ರೀಡಾ ಇಲಾಖೆಯನ್ನು ತೆಗೆದುಕೊಂಡಿದ್ದೇನೆ. ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ತಕ್ಷಣವೇ ಒಲಂಪಿಕ್ ತೆರಳುವ ಕ್ರೀಡಾಪಟುಗಳಿಗೆ 10 ಲಕ್ಷ ರೂ ಪ್ರೋತ್ಸಾಹ ಧನ ಘೋಷಣೆ ಮಾಡಲಾಯಿತು. ಕ್ರೀಡಾ ಇಲಾಖೆಗೆ ಕಾಯಕಲ್ಪ ತರುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಸುಮಾರು 100 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣಗಳನ್ನು ಉನ್ನತ್ತೀಕರಣಗೊಳಿಸಲಾಗುತ್ತಿದೆ. ಹೊಸದಾಗಿ ಕ್ರೀಡಾಂಗಣ ಬಳಕೆ ನೀಡಿ ಜಾರಿಗೆ ತರಲಾಗಿದೆ. ಕ್ರೀಡಾ ವಸತಿ ನಿಲಯ ಮತ್ತು ಕ್ರೀಡಾಂಗಣಗಳ ಉನ್ನತ್ತೀಕರಣಕ್ಕೆ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇಕಡ 2 ರಷ್ಟು ಮೀಸಲಾತಿ ಜಾರಿಗೆ ಪ್ರಯತ್ನಿಸಲಾಗುತ್ತಿದೆ. ಅಲ್ಲದೇ ಕ್ರೀಡಾ ಇಲಾಖೆ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇಕಡ 50 ಮೀಸಲಾತಿ ಜಾರಿಗೆ ಪ್ರಸ್ತಾವನೆ ಸಿದ್ದಪಡಿಸಲಾಗಿದೆ ಎಂದು ಸಚಿವ ನಾರಾಯಣಗೌಡ ಅವರು ಹೇಳಿದರು.

ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ 75 ಕ್ರೀಡಾಪಟುಗಳನ್ನ ದತ್ತು ತೆಗೆದುಕೊಂಡು, ಮುಂದಿನ ಒಲಂಪಿಕ್‌ಗೆ ಕಳುಹಿಸುವ ಕಾರ್ಯ ಮಾಡಲಾಗುತ್ತಿದೆ. ಸರ್ಕಾರಿ ನೌಕರರ ಸಂಘದ ಬೆಂಬಲಕ್ಕೆ ನಾವು ಇರುತ್ತೇವೆ. ನಿಮಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ 2 ಕೋಟಿ ರೂ. ಅನುದಾನ, ಸಚಿವರಿಗೆ ಧನ್ಯವಾದ

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಕಳೆದ ಸರ್ಕಾರಗಳು 25 ಲಕ್ಷ, 35 ಲಕ್ಷ  ರೂ. ಅನುದಾನವನ್ನು ನೀಡುತ್ತಿದ್ದವು. ಆದರೆ, ನಾರಾಯಣ ಗೌಡ ಅವರು ಕ್ರೀಡಾ ಇಲಾಖೆ ಸಚಿವರಾದ ಮೇಲೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ 2 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಮೊದಲು 1 ಕೋಟಿ ಅನುದಾನ ನೀಡಿದ್ದರು. ಆದರೆ ಸಾಕಾಗಲ್ಲ ಎಂದು ಕೇಳಿದಾಗ ಮತ್ತೊಂದು ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವ ಮೂಲಕ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟಕ್ಕೆ ಸಚಿವ ನಾರಾಯಣ ಗೌಡ ಅವರು ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದರು.

ಮೂರು ದಿನಗಳ ಕಾಲ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದ್ದು, ರಾಜ್ಯದ 31 ಜಿಲ್ಲೆಗಳಿಂದ ಸುಮಾರು 8 ಸಾವಿರ ಸರ್ಕಾರಿ ನೌಕರರು ಪಾಲ್ಗೊಂಡಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...