ಒಂದಲ್ಲ ಒಂದು ಯಡವಟ್ಟಿನಿಂದ ಪಾಕ್ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಪಾಕ್ ಕ್ರಿಕೆಟ್ ಆಟಗಾರನೊಬ್ಬ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಸಲಹೆ ನೀಡಲು ಹೋಗಿದ್ದ ಕೋಚ್ ಗೆ ಚಾಕು ತೋರಿಸಿದ್ದರಂತೆ. ಈ ವಿಚಾರ ಇದೀಗ ಬಹಿರಂಗವಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಹೌದು, ಪಾಕಿಸ್ಥಾನ ತಂಡದ ಮಾಜಿ ಆಟಗಾರ ಯೂನಿಸ್ ಖಾನ್ ಕೋಚ್ ಗಂಟಲಿಗೆ ಚೂರಿ ಹಿಡಿದು ಬೆದರಿಸಿದ್ದರಂತೆ. ಈ ವಿಚಾರವನ್ನು ಜಿಂಬಾಬ್ವೆಯ ಗ್ರ್ಯಾಂಟ್ ಫ್ಲವರ್ ಕ್ರಿಕೆಟ್ ಕಾರ್ಯಕ್ರಮವೊಂದರ ವೇಳೆ ಬಹಿರಂಗಪಡಿಸಿದ್ದಾರೆ. ನಾನು ಬ್ಯಾಟಿಂಗ್ ಬಗ್ಗೆ ಸಲಹೆ ನೀಡಲು ಹೋದಾಗ ಯೂನಿಸ್ ನನಗೆ ಚಾಕು ಹಿಡಿದು ಬೆದರಿಸಿದ್ದರು ಎಂದು ಹೇಳಿದ್ದಾರೆ.
ಈ ಘಟನೆ ನಡೆದು ಮೂರು ವರ್ಷ ಆಗಿದೆ. ಮೂರು ವರ್ಷದ ಹಿಂದೆ ಇಂತಹ ಕಹಿ ಘಟನೆಯೊಂದು ನಡೆದಿತ್ತು ಅಂತಾ ಗ್ರ್ಯಾಂಟ್ ಫ್ಲವರ್ ಹೇಳಿಕೊಂಡಿದ್ದಾರೆ. ಇನ್ನು ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಪಕ್ಕದಲ್ಲೇ ಕುಳಿತಿದ್ದ ಕೋಚ್ ಮಿಕಿ ಆರ್ಥರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರಂತೆ.