ಟೊಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರಾ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ನಂತರ ಧ್ವಜ ನಿರ್ವಹಣೆ ಕೋಡ್ ಅನುಸಾರವೇ ಅದನ್ನು ಮಡಿಚಿದ್ದಾರೆ.
ಟೊಕಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ನೀರಜ್ ಚೋಪ್ರಾ ಜಯಗಳಿಸಿದ ನಂತರ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ್ದಾರೆ. ಅವರ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿದ್ದು, ದೇಶದ ಜನರೆಲ್ಲ ಸಂಭ್ರಮಿಸಿದ್ದಾರೆ.
ಚಿನ್ನ ಗೆದ್ದ ಖುಷಿಯಲ್ಲಿ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ನೀರಜ್ ಚೋಪ್ರಾ ರಾಷ್ಟ್ರಧ್ವಜದ ಕೋಡ್ ಅನುಸಾರವೇ ಅದನ್ನು ಮಡಿಚಿದ್ದಾರೆ. ರಾಷ್ಟ್ರಧ್ವಜಕ್ಕೆ ಕಿಂಚಿತ್ತೂ ಅಗೌರವ ಬಾರದಂತೆ ಅದನ್ನು ಮೇಲ್ಮಟ್ಟದಲ್ಲಿಯೇ ಹಿಡಿದು ಮಡಿಚಿದ್ದಾರೆ.
13 ವರ್ಷಗಳ ನಂತರ ಒಲಿಂಪಿಕ್ಸ್ ನ ಭಾರತದ ರಾಷ್ಟ್ರಗೀತೆ ಕೇಳಿಬಂದಿದ್ದು, ಭಾರತೀಯರಿಗೆ ಮರೆಯಲಾಗದ ಹೆಮ್ಮೆಯ ಕ್ಷಣವಾಗಿದೆ. ಉತ್ಸಾಹದ ಸಂದರ್ಭದಲ್ಲಿ ನಾವು ಮರೆತುಬಿಡುತ್ತೇವೆ. ಆದರೆ, ವಿಜಯದ ಸಂಭ್ರಮದ ಕ್ಷಣದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹೆಗಲ ಮೇಲೆ ಹೊತ್ತು ನೀರಜ್ ಘನತೆ ತೋರಿದ್ದಾರೆ. ಅವರಿಗೆ ಹೆಗಲಮೇಲೆ ರಾಷ್ಟ್ರಧ್ವಜ ಹಾಕಿಕೊಂಡಾಗ ತಮ್ಮ ಜವಾಬ್ದಾರಿಯ ಅರಿವಿತ್ತು. ರಾಷ್ಟ್ರಧ್ವಜಕ್ಕೆ ಅವಮಾನವಾಗದಂತೆ ಅವರು ಕಾಳಜಿ ವಹಿಸಿದ್ದಾರೆ. ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೀರಜ್ ಅವರ ಐತಿಹಾಸಿಕ ಪ್ರದರ್ಶನದಿಂದಾಗಿ ಭಾರತದ ಚಿನ್ನದ ಪದಕದ ಬರ 13 ವರ್ಷಗಳ ನಂತರ ಕೊನೆಗೊಂಡಿದೆ. ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇದು ಎರಡನೇ ವೈಯಕ್ತಿಕ ಚಿನ್ನದ ಪದಕವಾಗಿದೆ. ಈ ಹಿಂದೆ ಅಭಿನವ್ ಬಿಂದ್ರಾ ಅವರು 13 ವರ್ಷಗಳ ಹಿಂದೆ 2008 ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದರು. ಇದಕ್ಕೂ ಮುನ್ನ ಭಾರತ ಹಾಕಿಯಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿತ್ತು.