ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಕೇರಳ ಓಪನರ್ ಮೊಹಮ್ಮದ್ ಅಜರುದ್ದೀನ್ ತಮ್ಮ ಸ್ಪೋಟಕ ಬ್ಯಾಟಿಂಗ್ ಶೈಲಿ ಮೂಲಕ ಹಿರಿಯ ಆಟಗಾರರ ಗಮನ ಸೆಳೆದಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಟ್ವಿಟರ್ನಲ್ಲಿ ಅಜರುದ್ದೀನ್ ಇನ್ನಿಂಗ್ಸ್ ಪ್ರದರ್ಶನ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ 197 ರನ್ಗಳ ಕಠಿಣ ಗುರಿಯನ್ನ ಬೆನ್ನಟ್ಟಿದ ಅಜರುದ್ದೀನ್ 10 ಸಿಕ್ಸ್ ಹಾಗೂ 9 ಬೌಂಡರಿಗಳನ್ನ ಬಾರಿಸಿದ್ದಾರೆ. 54 ಎಸೆತಗಳಲ್ಲಿ 137 ರನ್ಗಳನ್ನ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಕೇವಲ 17 ಓವರ್ಗಳಲ್ಲಿ ಕೇರಳ ತಂಡ ಗೆಲವು ಸಾಧಿಸುವಂತೆ ಮಾಡುವಲ್ಲಿ ಅಜರುದ್ದೀನ್ ಪಾತ್ರ ಮಹತ್ವದಾಗಿತ್ತು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲೇ ಅಜರುದ್ದೀನ್ ಎರಡನೇ ಅತಿ ವೇಗದ ಶತಕ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2018ರಲ್ಲಿ ರಿಷಭ್ ಪಂತ್ 32 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಸಾಧನೆ ಮಾಡಿದ್ದರು.
ಇನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಅಜರುದ್ದೀನ್ ಸಾಧನೆ ಕಂಡ ಸ್ಥಳೀಯ ನ್ಯೂಸ್ ಚಾನೆಲ್ ವೊಂದು ಕಾಸರಗೋಡಿನಲ್ಲಿರುವ ಪ್ರತಿಭಾವಂತ ಕ್ರಿಕೆಟಿಗನ ನಿವಾಸಕ್ಕೆ ಭೇಟಿ ನೀಡಿ ಸಂದರ್ಶನ ನಡೆಸಿತು. ಸಂದರ್ಶನದ ವೇಳೆ ಅಜರುದ್ದೀನ್ ತಮ್ಮ ಗುರಿಗಳ ಲಿಸ್ಟ್ ಬರೆದು ಅಂಟಿಸಿದ್ದ ಚೀಟಿಯೊಂದು ಮಾಧ್ಯಮದ ಕಣ್ಣಿಗೆ ಬಿದ್ದಿದೆ. ಈ ಲಿಸ್ಟ್ನಲ್ಲಿ ಅಜರುದ್ದೀನ್ ಐಪಿಲ್, ರಣಜಿ ಪಂದ್ಯದಲ್ಲಿ ನಾಲ್ಕು ಶತಕ, ಸ್ವಂತ ಮನೆ, ಬೆಂಜ್ ಕಾರು ಹಾಗೂ 2023ರಲ್ಲಿ ವಿಶ್ವಕಪ್ ಪಂದ್ಯದ ಟೀಂ ಇಂಡಿಯಾ ತಂಡದಲ್ಲಿ ಭಾಗಿಯಾಗುವ ಕನಸನ್ನ ಹೊಂದಿದ್ದಾರೆ. ಅಜರುದ್ದೀನ್ ಕನಸಿನ ಲಿಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ .