ಎಂಟು ವರ್ಷಗಳ ಹಿಂದೆ ಕೇರಳಕ್ಕೆ ಭೇಟಿ ಕೊಟ್ಟಿದ್ದ ಡಿಯಾಗೋ ಮರಡೋನಾ ಕಣ್ಣೂರಿನ ಹೊಟೇಲೊಂದರಲ್ಲಿ ತಂಗಿದ್ದರು. ಇದೀಗ ಆ ಹೋಟೇಲ್‌ನ ಕೋಣೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.
ಬುಧವಾರ ನಿಧನರಾದ 60 ವರ್ಷದ ಫುಟ್ಬಾಲ್ ದಂತಕಥೆ, 2012ರಲ್ಲಿ ಕೇರಳಕ್ಕೆ ಭೇಟಿ ಕೊಟ್ಟ ವೇಳೆ ಕಣ್ಣೂರಿನ ಬ್ಲೂ ನೈಲ್ ಹೊಟೇಲ್‌ನಲ್ಲಿ ತಂಗಿದ್ದರು. ಬಳಿಕ ಆ ಕೋಣೆಯನ್ನು ಮರಡೋನಾ ಸೂಟ್ ಎಂದು ಮರುನಾಮಕರಣ ಮಾಡಲಾಗಿತ್ತು.
ಅಕ್ಟೋಬರ್ 23, 2012ರಲ್ಲಿ ಕೇರಳಕ್ಕೆ ಭೇಟಿ ಕೊಟ್ಟಿದ್ದ ಮರಡೋನಾ ಇದೇ ಕೋಣೆಯಲ್ಲಿ ಎರಡು ದಿನಗಳ ಮಟ್ಟಿಗೆ ತಂಗಿದ್ದರು. ಆ ವೇಳೆ ಮರಡೋನಾ ಬಳಸಿದ್ದ ಎಲ್ಲ ವಸ್ತುಗಳನ್ನೂ ಸಹ ಅವರ ನೆನಪಿನಲ್ಲಿ ಈಗ ಮ್ಯೂಸಿಯಂ ಆಗಿರುವ ಈ ಕೋಣೆಯಲ್ಲಿ ಇಡಲಾಗಿದೆ.