ಮುಂಬೈ: ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಂಗೊಳಿಸಲಿದೆ. ಅಕ್ಟೋಬರ್ 17 ರಿಂದ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈ ಬಗ್ಗೆ ಮಾಹಿತಿ ನೀಡಿದ್ದು, ಅಕ್ಟೋಬರ್ 13 ರಂದು ನೂತನ ಜರ್ಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
ಹೊಸ ಜರ್ಸಿ ನೀಲಿ, ಹಸಿರು, ಬಿಳಿ, ಕೆಂಪು ಬಣ್ಣದ ಪಟ್ಟಿಗಳನ್ನು ಒಳಗೊಂಡಿರುತ್ತದೆ. ಭಾರತ ಕ್ರಿಕೆಟ್ ತಂಡದ ಅಧಿಕೃತ ಕಿಟ್ ಪ್ರಾಯೋಜಕರಾಗಿರುವ ಎಂಪಿಎಲ್ ಸಂಸ್ಥೆ 2023ರ ಡಿಸೆಂಬರ್ ವರೆಗೆ ಪ್ರಾಯೋಜಕತ್ವ ವಹಿಸಲಿದೆ. ಪ್ರಸ್ತುತ ಭಾರತ ತಂಡ ಕಡು ನೀಲಿ ಬಣ್ಣದ ರೆಟ್ರೋ ಜರ್ಸಿ ಧರಿಸಿ ಆಡುತ್ತಿದೆ.
ಯುಎಇ ಮತ್ತು ಓಮನ್ ನಲ್ಲಿ ಅಕ್ಟೋಬರ್ 17 ರಿಂದ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಹೊಸ ಜರ್ಸಿಯೊಂದಿಗೆ ಕಣಕ್ಕಿಳಿಯಲಿದೆ ಎಂದು ಹೇಳಲಾಗಿದೆ.