ಕೊರೊನಾ ವೈರಸ್ ಸೋಂಕಿಗೆ ಒಳಗಾದ ಬಳಿಕ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದ ಬ್ರೆಜಿಲ್ ಕ್ಲಬ್ ಪಾಲ್ಮಾಸ್ ಫುಟ್ಬಾಲ್ ಆಟಗಾರರಿದ್ದ ವಿಮಾನ ಅಪಘಾತಕ್ಕೀಡಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಉತ್ತರ ರಾಜ್ಯದ ಟೊಕಾಂಟಿನ್ಸ್ನಲ್ಲಿ ವಿಮಾನ ಟೇಕಾಫ್ ಆಗುತ್ತಿದ್ದ ವೇಳೆ ಇದಕ್ಕಿದ್ದಂತೆ ರನ್ವೇ ಕಡೆ ನುಗ್ಗಿದ ವಿಮಾನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಕ್ಲಬ್ನ ಅಧ್ಯಕ್ಷ ಹಾಗೂ ಪೈಲಟ್ ಕೂಡ ಮೃತರಾಗಿದ್ದಾರೆ ಎಂದು ತಂಡ ವರದಿ ಮಾಡಿದೆ. ವಿಲಾನೋವಾ ವಿರುದ್ಧದ ಪಂದ್ಯಕ್ಕೆ ಆಟಗಾರರು ಗೋಯಾನಿಯಾಗೆ ತೆರಳುತ್ತಿದ್ದರು ಎನ್ನಲಾಗಿದೆ.
ಕೊರೊನಾ ಸೋಂಕಿಗೆ ಒಳಗಾಗಿದ್ದ ಕಾರಣ ಈ ಆಟಗಾರರು ಖಾಸಗಿ ವಿಮಾನದಲ್ಲಿ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದರು ಎಂದು ಕ್ಲಬ್ ವಕ್ತಾರ ಇಜಾಬೆಲಾ ಮಾರ್ಟಿನ್ಸ್ ಹೇಳಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನ ಕ್ಲಬ್ ಅಧ್ಯಕ್ಷ ಲ್ಯೂಕಾಸ್ ಮೀರಾ ಹಾಗೂ ಆಟಗಾರರಾದ ಲ್ಯೂಕಾಸ್ ಪ್ರಾಕ್ಸೆಡೆಸ್, ಗಿಲ್ಹೆರ್ಮ್ ನೊ, ರಾನುಲೆ ಮತ್ತು ಮಾರ್ಕಸ್ ಮೊಲಿನಾರಿ ಎಂದು ಗುರುತಿಸಲಾಗಿದೆ. ಪೈಲಟ್ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ವಿಮಾನ ದುರಂತಕ್ಕೆ ಖಚಿತ ಕಾರಣ ತಿಳಿದು ಬಂದಿಲ್ಲ.