ವಿಶ್ವದಲ್ಲಿ ಕೊರೊನಾ ಆರ್ಭಟಿಸುತ್ತಿರುವ ಕಾರಣ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಅದರಲ್ಲೂ ಕ್ರೀಡೆ ಹಾಗೂ ಮನರಂಜನಾ ಕ್ಷೇತ್ರಗಳು ಆರ್ಥಿಕ ಹೊಡೆತದಿಂದ ತತ್ತರಿಸಿ ಹೋಗಿವೆ.
ಕೆಲ ದಿನಗಳ ಹಿಂದಿನಿಂದಷ್ಟೇ ಕ್ರೀಡೆ ಹಾಗೂ ಮನರಂಜನಾ ಚಟುವಟಿಕೆಗಳಿಗೆ ಬಹಳಷ್ಟು ನಿಯಮಾವಳಿಗಳೊಂದಿಗೆ ಅನುಮತಿ ನೀಡಲಾಗಿದ್ದು, ನಿಧಾನವಾಗಿ ಆರಂಭವಾಗುತ್ತಿವೆ.
ಕ್ರಿಕೆಟ್ ಪಂದ್ಯದ ವೇಳೆ ಬೌಲರ್ಗಳು ಚೆಂಡಿಗೆ ಎಂಜಲು ಹಚ್ಚಬಾರದು ಹಾಗೂ ಬೆವರು ಹಾಕಿ ಉಜ್ಜಬಾರದು ಎಂಬ ನಿಯಮ ರೂಪಿಸಲಾಗಿದೆ. ಇದರ ಮಧ್ಯೆಯೂ ಬೌಲರ್ ಒಬ್ಬರು ಅಭ್ಯಾಸ ಬಲದಿಂದ ಚೆಂಡಿಗೆ ಎಂಜಲು ಹಚ್ಚಿರುವ ಘಟನೆ ನಡೆದಿದೆ.
ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು, ಈ ವೇಳೆ ಇಂಗ್ಲೆಂಡ್ ನ ಡೊಮಿನಿಕ್ ಸಿಬ್ಲೆ, ಚೆಂಡಿಗೆ ಎಂಜಲು ಹಚ್ಚಿದ್ದಾರೆ. ಇದನ್ನು ಗಮನಿಸಿದ ಅಂಪೈರ್, ಸ್ಯಾನಿಟೈಸ್ ಟಿಶ್ಯೂ ಪಡೆದು ಚೆಂಡಿಗೆ ಸೋಂಕು ನಿವಾರಕ ಹಚ್ಚಿದ ಬಳಿಕ ಬಾಲ್ ವಾಪಸ್ ನೀಡಿದ್ದಾರೆ.