ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪುರಾಣ ಪ್ರಸಿದ್ಧ ಮಹಾಗಣಪತಿ ಮಂದಿರದ ಪ್ರಾಚೀನ ಶಿಲಾಮೂರ್ತಿ ಸವಕಳಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಸ್ಪರ್ಶ ಪೂಜಾ ಸೇವೆಯನ್ನು ಬಂದ್ ಮಾಡಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರವಾರದ ಸಹಾಯಕ ಆಯುಕ್ತರಾದ ಸುಧಾ ತಳವಾರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಬಹು ಪುರಾತನ ಮತ್ತು ವಿಶೇಷವಾದ ಗಣೇಶಮೂರ್ತಿ ಹಲವು ವರ್ಷಗಳಿಂದ ಸವಕಳಿಯಾಗುತ್ತಿದೆ. ಪ್ರಸ್ತುತ ಕೈ, ಭುಜ ಎದೆಯ ಭಾಗದಲ್ಲಿ ಮತ್ತಷ್ಟು ಸವಕಳಿಯಾದ ಕಾರಣ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ.
ಗಣ್ಯ ವ್ಯಕ್ತಿಗಳಿಗೂ ಕೂಡ ಸ್ಪರ್ಶ ಪೂಜೆ ನಿಷೇಧಿಸಲಾಗಿದೆ. ಮಹಾ ಗಣಪತಿ ದೇವಾಲಯದಲ್ಲಿ ವಿಶೇಷವಾಗಿ ನಡೆಯುವ ಕೊಟ್ಟೆ ಕಣಜ, ಸಕ್ಕರೆ ಕಣಜ ಸೇವೆಗಳು ಸ್ಥಗಿತವಾಗಿವೆ ಎನ್ನಲಾಗಿದೆ.

