ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ತಮ್ಮ 25ನೇ ದಿನದ ಉಪವಾಸ ಸತ್ಯಾಗ್ರಹದ ವೇಳೆ ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಿಂದ ಮೊದಲ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪೊಲೀಸ್ ಕ್ರಮ, ಬಂಧನ ಅಥವಾ ಕಿರುಕುಳ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದರೆ ತಾವು ಉಪವಾಸವನ್ನು ಅಂತ್ಯಗೊಳಿಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.
ಹೌದು. ‘ಚಲೋ ಸಂಸದ್’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪೊಲೀಸ್ ಕ್ರಮ, ಬಂಧನ ಅಥವಾ ಕಿರುಕುಳ ನಡೆಯುವುದಿಲ್ಲ ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದರೆ ತಕ್ಷಣವೇ ತಮ್ಮ 25 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ತಿಳಿಸಿದ್ದಾರೆ. ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಮೊದಲ ವಿಡಿಯೋ ಸಂದೇಶದಲ್ಲಿ “ನಾನು ಇನ್ನೂ ಬದುಕಿದ್ದೇನೆ” ಎಂದು ಹೇಳಿದ ಅವರು, ಆರೋಗ್ಯ ಸ್ಥಿರವಾಗಿದ್ದರೂ ಉಪವಾಸದಿಂದ 11 ಕೆ.ಜಿ. ತೂಕ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಮೂರು ನಿಮಿಷಗಳ ವಿಡಿಯೋದಲ್ಲಿ ಮಾತನಾಡಿದ ವಾಂಗ್ಚುಕ್, “ಅಭಿ ಭೀ ಜಿಂದಾ ಹೂಂ” (ನಾನು ಇನ್ನೂ ಬದುಕಿದ್ದೇನೆ) ಎಂದು ಆರಂಭಿಸಿದರು. ಉಪವಾಸದ ಪರಿಣಾಮವಾಗಿ ಸುಮಾರು 11 ಕೆ.ಜಿ. ತೂಕ ಹಾಗೂ ಸಾಕಷ್ಟು ಸ್ನಾಯುಬಲ ಕಳೆದುಕೊಂಡಿದ್ದರೂ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದರು. ವೈದ್ಯಕೀಯ ಮೇಲ್ವಿಚಾರಣೆಗೆ ಮಂಗಳವಾರ ರಾತ್ರಿ ಗುರುಗ್ರಾಮದ ಮೇದಾಂತಾ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿದರು.
ಇದೇ ವೇಳೆ, ‘ಚಲೋ ಸಂಸದ್’ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಶಾಂತಿಯುತ ನಡೆಗೆ ವಾಂಗ್ಚುಕ್ ಮೆಚ್ಚುಗೆ ವ್ಯಕ್ತಪಡಿಸಿದರು. ಲಾಠಿಚಾರ್ಜ್ ನಡೆದರೂ ವಿದ್ಯಾರ್ಥಿಗಳು ಯಾವುದೇ ಪ್ರತಿರೋಧ ತೋರಿಸದೆ ಸಂಯಮದಿಂದ ವರ್ತಿಸಿರುವುದು ತಮ್ಮನ್ನು ಆಳವಾಗಿ ಸ್ಪರ್ಶಿಸಿದ್ದು, ಉಪವಾಸ ಮುಂದುವರಿಸಲು ಮತ್ತಷ್ಟು ಸಂಕಲ್ಪ ನೀಡಿದೆ ಎಂದು ಹೇಳಿದರು.
“ಲಾಠಿಚಾರ್ಜ್‌ನ್ನು ಎದುರಿಸಿದರೂ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಲಿಲ್ಲ. ಅವರ ಸಂಯಮ ಮತ್ತು ಶಾಂತಿಯುತ ಹೋರಾಟಕ್ಕೆ ನಾನು ಸಲಾಂ ಸಲ್ಲಿಸುತ್ತೇನೆ. ಅವರ ಮೇಲೆ ನಡೆದ ಕ್ರೂರ ಕ್ರಮವನ್ನು ಕಂಡ ನಂತರವೇ ನನ್ನ ಉಪವಾಸವನ್ನು ಮುಂದುವರಿಸುವ ನಿರ್ಧಾರವನ್ನು ಕೈಗೊಂಡೆ,” ಎಂದು ಸೋನಂ ವಾಂಗ್ಚುಕ್ ಹೇಳಿದ್ದಾರೆ.
ಧರ್ಮೇಂದ್ರ ಪ್ರದಾನ್ ರಾಜೀನಾಮೆಗೆ ಪಟ್ಟು
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಾದ ವಿವಾದ ದೇಶದಲ್ಲಿ ಭುಗಿಲೆದ್ದಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ರಾಜೀನಾಮೆಗೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆಯ ಅಂಗವಾಗಿ ದೇಶದ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು, ಯುವಕರು, ಪರಿಸರ ಹೋರಾಟಗಾರರು ಮತ್ತು ನಾಗರಿಕ ಸಂಘಟನೆಗಳ ಸದಸ್ಯರು ಸಂಸತ್ ಭವನದತ್ತ ಶಾಂತಿಯುತ ಮೆರವಣಿಗೆ ನಡೆಸಿದರು. ಆದರೆ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಗಿ, ಪರಿಸ್ಥಿತಿ ಉದ್ವಿಗ್ನಗೊಂಡಿತು. ಪ್ರತಿಭಟನಾಕಾರರ ಆರೋಪದ ಪ್ರಕಾರ, ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಕೆಲವರು ಗಾಯಗೊಂಡಿದ್ದಾರೆ.
ಈ ಘಟನೆ ನಂತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪೊಲೀಸ್ ಕ್ರಮ, ಬಂಧನ ಅಥವಾ ಕಿರುಕುಳ ನಡೆಯಬಾರದು ಎಂದು ಸೋನಂ ವಾಂಗ್ಚುಕ್ ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಭರವಸೆ ನೀಡಿದರೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಅವರು ತಿಳಿಸಿದ್ದಾರೆ.

