ಮಂಗಳೂರು: ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು ರಾಜ್ಯಪಾಲರು ಇದನ್ನು ವಾಪಸ್ಸು ಕಳಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದ್ವೇಷ ಭಾಷಣ ಮಸೂದೆ ಅಂಗೀಕಾರವಾಗಿದೆ. ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದರು.
ಇನ್ನು ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಮಾಡುವ ವಿಚಾರವಾಗಿ ಪಾದಯಾತ್ರೆ ಮಾಡುವುದಾದರೆ ಮಾಡಲಿ ಬಿಡಿ. ಏಕೆ ಮಾಡುತ್ತಾರೆ? ನಾವು ಹಿಂದೆ ಪಾದಯಾತ್ರೆ ಮಾಡಿದ್ದು, ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಅವರು ಸವಾಲು ಹಾಕಿದ್ದರು. ಅದಕ್ಕಾಗಿ ಪಾದಯಾತ್ರೆ ಕೈಗೊಳ್ಳಲಾಯಿತು. ಇವರು ಪಾದಯಾತ್ರೆ ಏಕೆ ಮಾಡಬೇಕು ಎಂದು ಪ್ರಶ್ನಿಸಿದರು.
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೆ ಘಟನೆಗೆ ಪ್ರಚೋದನೆ ಆಯಿತು ಎಂದರು. ಜನಾರ್ದನ ರೆಡ್ಡಿ , ಶ್ರೀರಾಮುಲು ಅವರು ಸ್ಥಾನ ಕಳೆದುಕೊಂಡಿದ್ದರಿಂದ ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದರು.

