ಶಿವಮೊಗ್ಗ: ಕಡಜದ ಹುಳು ಕಡಿದು 8 ವರ್ಷದ ಬಾಲಕ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಬಳಿ ನಡೆದಿದೆ.
ಇಲ್ಲಿನ ಅತ್ತಿಸರದಲ್ಲಿ ಈ ದುರಂತ ಸಂಭವಿಸಿದೆ. ನಿಶ್ಚಿತ್ (8) ಮೃತ ಬಾಲಕ. ಮನೆಯ ಹಿಂದಿನ ಬಾಳೆ ಗಿಡದಲ್ಲಿ ಕಡಜದ ಹುಳುವಿನ ಗೂಡು ಇತ್ತು. ತಂದೆ ವೆಂಕಟೇಶ್ ಹಾಗೂ ಬಾಲಕ ನಿಶ್ಚಿತ್ ಮೇಲೆ ಕಡಜದ ಹುಳುಗಳು ದಾಳಿ ನಡೆಸಿದ್ದವು.
ತಕ್ಷಣವೇ ಹೆಗ್ಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರನ್ನೂ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ತಂದೆ-ಮಗನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ನಿಶ್ಚಿತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ತಂದೆ ವೆಂಕಟೇಶ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

