ಬೆಳಗಾವಿ: ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ನನ್ನು ಬಂಧಿಸಿದ್ದಾರೆ.
ಮಂಗಳೂರು ವಿಭಾಗದ ಇಡಿ ಅದಿಕಾರಿಗಳು ಶಿವಾನಂದ ನೀಲಣ್ಣವರ್ ನನ್ನು ಬಂಧಿಸಿದ್ದಾರೆ. 12 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಮಂಗಳೂರು ಇಡಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು ವಿಚಾರಣೆ ಆರಂಭಿಸಿದಾರೆ.
ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಉದ್ಯಮಿ ಶಿವಾನಂದ ನೀಲಣ್ಣವರ್ ಆರ್‌ಬಿಐ ನಿಯಮ ಉಲ್ಲಂಘಿಸಿ ಅನಧಿಕೃತ ಬಡ್ಡಿ ವ್ಯವಹಾರ ನಡೆಸಿ, ಅಧಿಕ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿದ ಆರೋಪ ಕೇಳಿಬಂದಿದೆ. ಬರೋಬ್ಬರಿ 4,500 ಕೋಟಿ ರೂಪಾಯಿ ವಂಚನೆಯೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಲ್ಲಿಯೂ ಪ್ರಕರಣ ದಾಖಲಾಗಿದ್ದು, ಶಿವಾನಂದ್ ನೀಲಣ್ಣವರ್ ನನ್ನು ಬಂಧಿಸಿ ತನಿಖೆ ನಡೆಸಿದೆ.

