ಡಿಸಿ.. ದೇವದಾಸ್ & ಚಂದ್ರ ಎಂಬ ಚಿತ್ರದ ನಾಯಕ ಹಾಗೂ ನಾಯಕಿ ಪಾತ್ರಗಳ ಹೆಸರುಗಳನ್ನೇ ಟೈಟಲ್ ಮಾಡಿಕೊಂಡಿರುವ ಈ ಚಿತ್ರಕ್ಕೆ ಅರುಣ್ ಮಾದೇಶ್ವರನ್ ನಿರ್ದೇಶನವಿದೆ.
ನಾಯಕನಾಗಿ ತಮಿಳಿನ ಒನ್ ಆಫ್ ದ ಬೆಸ್ಟ್ ಡೈರೆಕ್ಟರ್ ಎನಿಸಿಕೊಂಡಿರುವ ಲೋಕೇಶ್ ಕನಗರಾಜ್ ನಟಿಸಿದ್ದು, ಇದೇ ಮೊದಲ ಬಾರಿಗೆ ಹೀರೊ ಆಗಿದ್ದಾರೆ. ನಾಯಕಿಯರಾಗಿ ಸಂಜನಾ ಹಾಗೂ ವಾಮಿಕಾ ಗಬ್ಬಿ ಅಭಿನಯಿಸಿದ್ದಾರೆ.
ದರೋಡೆ ಕಥೆಗಳನ್ನು ಭಿನ್ನ ವಿಭಿನ್ನವಾಗಿ ತೆರೆ ಮೇಲೆ ತರುವ ಕಲೆಯಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ತಮಿಳು ಚಿತ್ರರಂಗ ಡಿಸಿ ಮೂಲಕ ಮತ್ತೊಮ್ಮೆ ಇಂಥ ಕಥೆಗಳನ್ನು ಜನರಿಗೆ ಥ್ರಿಲ್ ನೀಡುವ ರೀತಿಯಲ್ಲಿ ಹೇಳುವಲ್ಲಿ ನಾವೇ ಮೇಲು ಎಂಬುದನ್ನು ಸಾಬೀತುಪಡಿಸಿದೆ.
ನಾಯಕ ಒಂದೊಳ್ಳೆ ಉದ್ದೇಶದಿಂದ ಮಾಡುವ ದರೋಡೆ ಅವನನ್ನು ಪೊಲೀಸ್ ಇಲಾಖೆಯಿಂದ ಶೂಟ್ ಎಟ್ ಸೈಟ್ ಆರ್ಡರ್ ಪಡೆದುಕೊಳ್ಳುವಂತೆ ಮಾಡಿಬಿಡುತ್ತದೆ. ಹೀಗೆ ಮಾಡಿದ ದರೋಡೆಯ ಹಣವನ್ನು ಬೆನ್ನತ್ತ ಪೊಲೀಸರಿಂದ ತಪ್ಪಿಸಿಕೊಂಡು ನಾಯಕ ಹಾಗೂ ತಂಡ ತನ್ನ ಗುರಿ ತಲುಪುತ್ತಾ ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ.
ಈ ಒನ್‌ಲೈನ್ ಸಾಮಾನ್ಯವೆನಿಸಿದರೂ ಇತರ ಚಿತ್ರಗಳ ಹಾಗೆ ಈ ಚಿತ್ರದ ಕಥೆಯನ್ನು ನಿರ್ದೇಶಕ ಅರುಣ್ ಸಾಧಾರಣವಾಗಿ ಬರೆದುಕೊಂಡಿಲ್ಲ. ಬದಲಾಗಿ ನಾಯಕ ದೇವದಾಸ್‌ನ ಎಸ್ಕೇಪ್ ಜರ್ನಿಯಲ್ಲಿ ಇಬ್ಬರು ನಾಯಕಿಯರ ಆಗಮನವಾಗಲಿದ್ದು, ಮೊದಲ ನಾಯಕಿ ಸಂಜನಾ ( ಪಾರ್ವತಿ ) ಆಗಮನ ಮತ್ತು ನಿರ್ಗಮನ ನಾಯಕನ ಬದುಕಿನಲ್ಲೇ ಒಂದು ಮರೆಯಲಾಗದ ಅಸ್ಪಷ್ಟ ಅಧ್ಯಾಯವಾಗಿ ಉಳಿದುಕೊಂಡುಬಿಡಲಿದೆ. ಇನ್ನು ಮೊದಲ ನಾಯಕಿಯ ನಿರ್ಗಮನದ ಬಳಿಕ ತನ್ನ ರೋಚಕ ಜರ್ನಿಯನ್ನು ಮುಂದುವರಿಸುವ ದೇವದಾಸ್‌ಗೆ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಎರಡನೇ ನಾಯಕಿ ವಾಮಿಕಾ ಗಬ್ಬಿ ( ಚಂದ್ರ ) ಪರಿಚಯವಾಗಲಿದೆ ಹಾಗೂ ತನ್ನದೇ ಹಣ ತಲುಪಿಸಲಿರುವ ನಾಯಕನ ಬೆನ್ನಿಗೆ ಈಕೆ ಬೀಳಲಿದ್ದಾಳೆ. ಎರಡನೇ ನಾಯಕಿಗೂ, ನಾಯಕನಿಗೂ ಏನು ಸಂಬಂಧ? ಮೊದಲ ನಾಯಕಿಗೆ ಏನಾಯ್ತು? ಬೆನ್ನತ್ತುವ ಪೊಲೀಸರಿಂದ ತಪ್ಪಿಸಿಕೊಂಡು ದೇವದಾಸ್ ತನ್ನ ಗುರಿ ಮುಟ್ಟುತ್ತಾನಾ? ಎಂಬುದನ್ನು ಚಿತ್ರ ವೀಕ್ಷಿಸಿಯೇ ತಿಳಿದುಕೊಳ್ಳಬೇಕು.
ಮೇಲೆ ಹೇಳಿದಂತೆ ವೇಶ್ಯೆ ಪಾತ್ರ ನಿರ್ವಹಿಸಿರುವ ವಾಮಿಕ ಗಬ್ಬಿಯನ್ನು ನಿರ್ದೇಶಕ ಎಲ್ಲೂ ಅಶ್ಲೀಲವಾಗಿ ತೋರಿಸಿಲ್ಲ. ತನ್ನನ್ನೇ ತಾನು ಪ್ಲಾಸ್ಟಿಕ್ ಗುಲಾಬಿ ಎಂದು ಕರೆದುಕೊಳ್ಳುವ ವಮಿಕಾಗೆ ಚಿತ್ರದಲ್ಲಿ ಮಹತ್ವದ ಜಾಗವಿದೆ. ವೇಶ್ಯೆ ಪಾತ್ರವನ್ನು ಇತ್ತೀಚಿನ ದಿನಗಳಲ್ಲಿ ಯಾವ ನಿರ್ದೇಶಕನೂ ತೋರಿಸಿರದ ರೀತಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ ಹಾಗೂ ಅಶ್ಲೀಲತೆಯೇ ವೇಶ್ಯೆ ಪಾತ್ರಧಾರಿಗಳ ಬಿಂಬ ಎಂಬ ಮನಸ್ಥಿತಿ ಇರುವ ಸಿನಿಮಾ ಮಂದಿಗೆ ಇದೊಂದು ಪಾಠವಾಗಿದೆ. ಈ ಪಾತ್ರ ಸಿನಿ ರಸಿಕರು ಎರಡರಿಂದ ಮೂರು ದಶಕಗಳ ಕಾಲ ಎವರ್‌ಗ್ರೀನ್ ಪಾತ್ರಗಳ ಕುರಿತ ಚರ್ಚೆಯಲ್ಲಿ ಉಲ್ಲೇಖಿಸುವ ಅರ್ಹತೆಯನ್ನು ಹೊಂದಿದೆ. ಇನ್ನು ಹೆಚ್ಚಾಗಿ ಗನ್ ಜತೆಗೆ ಕಾಣಿಸಿಕೊಳ್ಳುವ ನಾಯಕ ಲೋಕೇಶ್ ಕನಗರಾಜ್ ಅಭಿನಯ ಅದ್ಭುತ. ಲೋಕಿ ನಾಯಕ ಎಂದು ಘೋಷಣೆಯಾದಾಗ ಟ್ರೋಲ್ ಮಾಡಿದ್ದವರೆಲ್ಲರ ಬಾಯಿಗೂ ಬೀಗ ಜಡಿಯುವ ಮಟ್ಟಕ್ಕೆ ದೇವದಾಸ್ ಪಾತ್ರದಲ್ಲಿ ಜೀವಿಸಿದ್ದಾರೆ. ಈ ಪ್ಲಾಸ್ಟಿಕ್ ಗನ್ ಹಾಗೂ ಮೆಟಲ್ ಗನ್ ಕಥೆ ವಿಭಿನ್ನವಾಗಿದ್ದು, ಹೊಸತನ ಇರುವ ಕಥೆ ಹೇಳ್ರಯ್ಯ ಎನ್ನುವ ಪ್ರೇಕ್ಷಕರಿಗೆ ಈ ಚಿತ್ರ ಫುಲ್ ಮೀಲ್ಸ್ ಬಿರಿಯಾನಿ ವಿಥ್ ಲೆಗ್ ಪೀಸ್.
ನಿರ್ದೇಶಕ ಅರುಣ್ ಮಾದೇಶ್ವರನ್ ಹಾಗೂ ನಾಯಕ ಲೋಕೇಶ್ ಕನಗರಾಜ್ ಮಾತ್ರವಲ್ಲದೇ ಈ ಚಿತ್ರಕ್ಕೆ ಮತ್ತೋರ್ವ ಹೀರೋ ಇದ್ದಾರೆ. ಅವರೇ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್. ಚಿತ್ರದ ಪ್ರೊಡಕ್ಷನ್ ಹೌಸ್ ಬ್ಯಾನರ್ ಕ್ಲಿಪ್‌ನಿಂದ ಆರಂಭವಾಗುವ ಈ ಮಹಾನುಭಾವನ ಕೈಚಳಕ ಎಂಡ್ ಕ್ರೆಡಿಟ್ ಸೀನ್‌ವರೆಗೂ ಅಬ್ಬರಿಸಿದೆ. ಮುಂದೇನು ಮುಂದೇನು ಎಂದು ರೋಚಕವಾಗಿ ಸಾಗಿ, ಕ್ರೇಜಿ ಎನಿಸುವಂತ ದೃಶ್ಯಗಳಿರುವ ಚಿತ್ರಕ್ಕೆ ತಕ್ಕನಾಗಿ ಬರೋಬ್ಬರಿ ಹದಿನೈದು ವಿಭಿನ್ನ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಬಾರಿಸಿರುವ ಅನಿರುದ್ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ. ಇನ್ನು ಚಿತ್ರದ ಸಂಕಲನ ಸಂಗೀತ, ಚಿತ್ರಕಥೆಯನ್ನು ಅತ್ಯುತ್ತಮವಾಗಿ ಸರಿದೂಗಿಸಿದ್ದು, ಚಿತ್ರ ನೋಡುಗರಿಗೆ ಇಷ್ಟವಾಗುವಲ್ಲಿ ಗೆದ್ದಿದೆ. ಕಲಾ ತಂಡ, ವಸ್ತ್ರ ವಿನ್ಯಾಸ ತಂಡ ಹಾಗೂ ಮೇಕಪ್‌ನಿಂದ ಹಿಡಿದು ಎಲ್ಲ ವರ್ಗವೂ ತಮ್ಮ ಪಾಲಿನ ಕೆಲಸವನ್ನು ನಿಖರವಾಗಿ ಮಾಡಿಮುಗಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷ ಇಲ್ಲಿಯವರೆಗೂ ಬಿಡುಗಡೆಯಾಗಿರುವ ತಮಿಳು ಚಿತ್ರಗಳ ಪಟ್ಟಿಯನ್ನು ಹಾಕಿ ಕುಳಿತರೆ ಡಿಸಿಯನ್ನೇಕೆ ನಂಬರ್ ಒನ್ ಸ್ಥಾನದಲ್ಲಿ ಇಡಬಾರದು ಎಂದು ಚಿಂತಿಸುವ ಮಟ್ಟಕ್ಕೆ ಚಿತ್ರವಿದೆ.

