ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಸೆಪ್ಟೆಂಬರ್ 10ರಂದು 100 ದಿನಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸರ್ಕಾರದ ಶತದಿನದ ಸಂಭ್ರಮದ ವೇಳೆ ರೈತರು, ಯುವಜನರು ಸೇರಿದಂತೆ ವಿವಿಧ ವರ್ಗಗಳಿಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡುವ ನಿರೀಕ್ಷೆ ಮೂಡಿದೆ.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳ ಸುಮಾರು 80 ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
‘ಮನೆ ಬಾಗಿಲಿಗೆ ನಮ್ಮ ಸರ್ಕಾರ’ಕ್ಕೆ ಒತ್ತು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ‘ನುಡಿದಂತೆ ನಡೆದ ಸರ್ಕಾರ’ ಎಂಬುದು ಪ್ರಮುಖ ಆಡಳಿತದ ಹೆಗ್ಗುರುತಾಗಿತ್ತು.
ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ಆದ ಆಡಳಿತದ ಹೆಜ್ಜೆ ಗುರುತು ಮೂಡಿಸುವ ನಿಟ್ಟಿನಲ್ಲಿ ‘ಮನೆ ಬಾಗಿಲಿಗೆ ನಮ್ಮ ಸರ್ಕಾರ’ ಎಂಬ ಫ್ಲ್ಯಾಗ್‌ಶಿಪ್ ಕಾರ್ಯಕ್ರಮದ ಮೂಲಕ ಹೊಸ ಯೋಜನೆಗಳು ಹಾಗೂ ಘೋಷಣೆಗಳಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ?
100 ದಿನಗಳ ಸಂಭ್ರಮದ ಕಾರ್ಯಕ್ರಮದಲ್ಲಿ ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಕೆಲವು ಆದ್ಯತೆಯ ಕ್ಷೇತ್ರಗಳಿಗೆ ನಾಲ್ಕೈದು ಹೊಸ ಘೋಷಣೆಗಳು ಹೊರಬೀಳುವ ನಿರೀಕ್ಷೆಯಿದೆ.
ವಿಶೇಷವಾಗಿ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ, ಯುವಜನರಿಗೆ ಅವಕಾಶಗಳು ಹಾಗೂ ವಿವಿಧ ವರ್ಗಗಳಿಗೆ ಅನುಕೂಲವಾಗುವ ಯೋಜನೆಗಳ ಕುರಿತು ಸರ್ಕಾರದ ಘೋಷಣೆ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಜೂನ್ 3ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ 100 ದಿನಗಳ ಪಯಣವನ್ನು ಸರ್ಕಾರವು ವಿಶೇಷವಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಈ ಶತದಿನದ ಸಂಭ್ರಮದ ವೇದಿಕೆಯಲ್ಲೇ ಹೊಸ ಘೋಷಣೆಗಳ ರೂಪುರೇಷೆ ಸ್ಪಷ್ಟವಾಗುವ ಸಾಧ್ಯತೆಯಿದೆ.
ರೈತರಿಗೆ ಸಿಗಲಿದೆಯೇ ಗುಡ್‌ನ್ಯೂಸ್?
ಈ ಬಾರಿ ಮುಂಗಾರು ಕೊರತೆಯಿಂದ ರಾಜ್ಯದ ಹಲವು ಭಾಗಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ ಸುಮಾರು 40ರಿಂದ 50 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಕುರಿತು ಅಧ್ಯಯನ ನಡೆಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಸ್ವತಃ ಪರಿಶೀಲಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬರದಿಂದ ಆತಂಕಕ್ಕೊಳಗಾಗಿರುವ ರೈತ ಸಮುದಾಯಕ್ಕೆ ನೆಮ್ಮದಿ ನೀಡುವಂತಹ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
· ವಿಶೇಷ ಕಾರ್ಯಕ್ರಮ ಮತ್ತು ಉದ್ಘಾಟನೆ: ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸರ್ಕಾರದ 100 ದಿನಗಳ ಸಂಭ್ರಮದ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
· ಫಲಾನುಭವಿಗಳೊಂದಿಗೆ ಸಂವಾದ: ಗ್ಯಾರಂಟಿ ಯೋಜನೆಗಳ ಸುಮಾರು 80 ಜನ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂವಾದ ನಡೆಸಲಿದ್ದಾರೆ.
· ಭರ್ಜರಿ ಹೊಸ ಘೋಷಣೆಗಳು: ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಕೆಲವು ಆದ್ಯತೆಯ ಕ್ಷೇತ್ರಗಳಿಗೆ ನಾಲ್ಕೈದು ಭರ್ಜರಿ ಹೊಸ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ. ರೈತರು ಮತ್ತು ಯುವಜನರು ಸೇರಿದಂತೆ ವಿವಿಧ ವರ್ಗದವರಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ.
· ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ನೆರವು: ಈ ಬಾರಿ ಮುಂಗಾರು ಅಭಾವದಿಂದಾಗಿ ರಾಜ್ಯದ 101 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನು 40ರಿಂದ 50 ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಲು ಅಧ್ಯಯನ ನಡೆಸಲಾಗಿದೆ. ಬರದಿಂದ ಆತಂಕಗೊಂಡಿರುವ ಅನ್ನದಾತರ ಅಭ್ಯುದಯಕ್ಕೆ ಭರವಸೆ ತುಂಬುವ ಕೊಡುಗೆಗಳನ್ನು ನೀಡಲು ಸರ್ಕಾರ ಮುಂದಾಗಿದೆ.
· ಮುಖ್ಯಮಂತ್ರಿಗಳ ಮಾತು: “ಸೆ.10ರಂದು ನನ್ನ ಸರ್ಕಾರ 100 ದಿನಗಳನ್ನು ಪೂರೈಸುತ್ತಿದ್ದು, ಸರ್ಕಾರವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬ ಬಗ್ಗೆ ಈಗಾಗಲೇ ಹಲವು ಕಾರ್ಯಕ್ರಮ ಘೋಷಿಸಿದ್ದೇನೆ ಹಾಗೂ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಘೋಷಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ” ಎಂದು ಸಿಎಂ ತಿಳಿಸಿದ್ದಾರೆ.
ಮಾತು ಅಂದರೆ ಕೇವಲ ಶಬ್ದಗಳಲ್ಲ, ಅದು ನಂಬಿಕೆಯ ಬೆಸುಗೆ ; ಸಿಎಂ ಡಿಕೆಶಿ
ಮಾತು ಅಂದರೆ ಕೇವಲ ಶಬ್ದಗಳಲ್ಲ, ಅದು ನಂಬಿಕೆಯ ಬೆಸುಗೆ. ಜನಸಾಮಾನ್ಯರ ಅಂತರಾಳದ ದನಿಯಾಗಿ, ಅವರ ನೋವು-ನಲಿವುಗಳಿಗೆ ಕಿವಿಯಾಗುವ ಈ ಕ್ಷಣಗಳೇ ನಿಜವಾದ ಮಾತುಕತೆ.. ಕಾಯಕ ಜೀವಿಗಳೊಂದಿಗೆ ಮಾತುಕತೆ ಎಂದು ಸಿಎಂ ಡಿಕೆಶಿ ವಿಡಿಯೋ ಹಂಚಿಕೊಂಡಿದ್ದಾರೆ.

