ಬೆಂಗಳೂರು: ಕುಡಿದು ವಾಹನ ಚಾಲನೆ ಕಾನೂನು ಬಾಹಿರ. ಅಂತಹವರಿಗೆ ಪರಿಹಾರ ನೀಡುತ್ತಾ ಹೋದರೆ ಅದು ರಸ್ತೆಯಲ್ಲಿ ಅನುಸರಿಸಬೇಕಾದ ನಿಯಮಗಳ ಉಲ್ಲಂಘನೆಗೆ ದಾರಿ ಮಾಡಿಕೊಡುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರುವ ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವವರಿಗೆ ಉದಾರತೆ ತೋರಲಾಗದು ಎಂದು ಹೈಕೋರ್ಟ್ ಹೇಳಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಸಂತ್ರಸ್ತನಿಗೆ ಪರಿಹಾರ ಮಂಜೂರು ಮಾಡಿದ ವಾಹನ ಅಪಘಾತಗಳ ಪರಿಹಾರ ನ್ಯಾಯಾಧೀಕರಣದ ಆದೇಶ ರದ್ದು ಕೋರಿ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ಪೀಠ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಗಂಭೀರ ಅಪರಾಧ. ಮದ್ಯದ ಮತ್ತಿನಲ್ಲಿ ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾದರೆ, ಅಜಾಗರೂಕತೆಯಾಗುತ್ತದೆ. ವೈದ್ಯಕೀಯ ದಾಖಲೆಗಳು ಹಾಗೂ ಎಫ್‌ಐರ್‌ನಲ್ಲಿನ ಮಾಹಿತಿಯಂತೆ ಅಪಘಾತದಲ್ಲಿ ಕಾರು ಭಾಗಿಯಾಗಿರುವುದು ಸತ್ಯ. ಆದರೆ, ಗಾಯಾಳು ಆದ ಬೈಕ್ ಸವಾರ ಆಸ್ಪತ್ರೆಗೆ ದಾಖಲಾದಾಗ ಆತನ ರಕ್ತದಲ್ಲಿ ಮದ್ಯದ ಅಂಶವಿತ್ತು. ಆ ಕುರಿತು ವೈದ್ಯರು ಸಾಕ್ಷ್ಯ ನುಡಿದಿದ್ದಾರೆ. ಹಾಗಾಗಿ, ಬೈಕ್ ಸವಾರ ತನ್ನ ಸ್ವಂತ ನಿರ್ಲಕ್ಷ್ಯದಿಂದಲೂ ಅಪಘಾತಕ್ಕೆ ಕಾರಣನಾಗಿದ್ದಾನೆ ಎಂಬುದು ಸಾಬೀತಾಗಿದೆ ಎಂದು ತೀರ್ಮಾನಿಸಿದೆ.
ವಾಹನಗಳ ಸಂಖ್ಯೆ ಮತ್ತು ರಸ್ತೆ ದಟ್ಟಣೆ ಹೆಚ್ಚುತ್ತಿರುವ ಈ ಕಾಲದಲ್ಲಿ ವಾಹನ ಸವಾರರು ಕಾನೂನಿಗೆ ಗೌರವ ನೀಡಬೇಕು. ಕುಡಿದು ವಾಹನ ಚಾಲನೆ ಕಾನೂನುಬಾಹಿರ. ಅಂತಹವರಿಗೆ ಪರಿಹಾರ ನೀಡುತ್ತಾ ಹೋದರೆ ಅದು ರಸ್ತೆಯಲ್ಲಿ ಅನುಸರಿಸಬೇಕಾದ ನಿಯಮಗಳ ಉಲ್ಲಂಘನೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
ಅವರಿಗೆ ಶಾಸನಗಳ ರಕ್ಷಣೆ ವಿಸ್ತರಿಸಿ ಉದಾರತೆತೋರಲಾಗದು ಎಂದು ಪೀಠ ಅಭಿಪ್ರಾಯಟ್ಟಿದ್ದು, ಅಂತಿಮವಾಗಿ ಬೈಕ್ ಚಾಲಕನ ಮದ್ಯಪಾನದ ನಿರ್ಲಕ್ಷ್ಯಕ್ಕಾಗಿ ನಿಗದಿಪಡಿಸಿದ್ದ ಒಟ್ಟು ಪರಿಹಾರ ಮೊತ್ತದಲ್ಲಿ ಶೇ.30ರಷ್ಟು ಕಡಿತಗೊಳಿಸಲಾಗಿದೆ. ಶೇ.70ರಷ್ಟನ್ನು ಮಾತ್ರ ಬಡ್ಡಿ ಸಮೇತ 8 ವಾರದಲ್ಲಿ ಸಂತ್ರಸ್ತನಿಗೆ ಮೇಲ್ಮನವಿದಾರ ಕಂಪನಿ ಪಾವತಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಸೆ. 10 ಮತ್ತು 11: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೆ.10 ಮತ್ತು 11 ರಂದು ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸೆ.10 ರ ಬೆಳಿಗ್ಗೆ 10.30 ಗಂಟೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ನೆರವೇರಿಸುವರು. ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ, ಭದ್ರಾವತಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಬಿ.ಕೆ.ಸಂಗಮೇಶ್ವರ, ಸಾಗರ ಕ್ಷೇತ್ರದ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಉಪಸ್ಥಿತಿ ಇರಲಿದ್ದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಅಪರ ಜಿಲ್ಲಾಧಿಕಾರಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಇತರರು ಪಾಲ್ಗೊಳ್ಳುವರು.

