ಉದ್ಯೋಗದಲ್ಲಿದ್ದು ಸಂಪಾದಿಸುವ ವಯಸ್ಸಿನಲ್ಲಿ ಎಲ್ಲವೂ ಸರಿಯಾಗಿರಬಹುದು. ಎಲ್ಲಾ ಖರ್ಚುಗಳು ಮತ್ತು ಅಗತ್ಯಗಳಿಗೆ ತಕ್ಕಂತೆ ಸಂಬಳವೂ ಇರಬಹುದು. ಆದರೆ ಅಷ್ಟೇ ಸಾಕಾಗುವುದಿಲ್ಲ.
ಉದ್ಯೋಗದ ನಂತರದ ಅವಧಿ, ತುರ್ತು ಅಗತ್ಯಗಳು ಹಾಗೂ ನಿವೃತ್ತಿಯ ನಂತರದ ಆದಾಯದ ಬಗ್ಗೆಯೂ ಯೋಚಿಸಬೇಕು. ವಿಶೇಷವಾಗಿ ಹಿರಿಯ ನಾಗರಿಕರಿಗೆ ನಿವೃತ್ತಿಯ ನಂತರ ದೊಡ್ಡ ಪ್ರಮಾಣದ ಆದಾಯ ಇಲ್ಲದಿರಬಹುದು. ಇದ್ದರೂ ನಿಯಮಿತ ಆದಾಯದ ಆಯ್ಕೆಗಳು ಕಡಿಮೆ. ಕೆಲವರಿಗೆ ಪಿಂಚಣಿ ರೂಪದಲ್ಲಿ ಅಲ್ಪ ಪ್ರಮಾಣದ ಹಣ ಮಾತ್ರ ಬರುತ್ತಿರಬಹುದು. ಆದ್ದರಿಂದ ವೃದ್ಧಾಪ್ಯದಲ್ಲಿ ಯಾವುದೇ ತೊಂದರೆ ಆಗದಂತೆ ಮುಂಚಿತವಾಗಿಯೇ ಉತ್ತಮ ಯೋಜನೆ ರೂಪಿಸಿಕೊಂಡು ಉಳಿತಾಯ ಮತ್ತು ಹೂಡಿಕೆ ಮಾಡುವುದು ಅಗತ್ಯ.
ಸಾಮಾನ್ಯವಾಗಿ ಹಿರಿಯ ನಾಗರಿಕರು ಹೆಚ್ಚಿನ ಅಪಾಯದ ಹೂಡಿಕೆಗಳನ್ನು ಇಷ್ಟಪಡುವುದಿಲ್ಲ. ತಮ್ಮ ಹೂಡಿಕೆಯ ಮೇಲೆ ಸ್ಥಿರ ಮತ್ತು ಖಚಿತ ಆದಾಯವನ್ನು ಬಯಸುತ್ತಾರೆ. ಹೀಗಾಗಿ ಈ ವಯಸ್ಸಿನಲ್ಲಿ ಹೆಚ್ಚಿನವರು ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಮಾಡುತ್ತಾರೆ.
ಆದರೆ ಹಿರಿಯ ನಾಗರಿಕರಿಗೆ ಬ್ಯಾಂಕ್ ಎಫ್‌ಡಿಗಳ ಹೊರತಾಗಿಯೂ ಸ್ಥಿರ ಆದಾಯ ನೀಡುವ ಇತರ ಹೂಡಿಕೆ ಆಯ್ಕೆಗಳಿವೆ. ಅವುಗಳಲ್ಲಿ ಕೆಲವು ಸರ್ಕಾರದ ಯೋಜನೆಗಳಾಗಿವೆ. ಅಂತಹದ್ದೇ Senior Citizens Savings Scheme. ಇದು ಸರ್ಕಾರದ ಬೆಂಬಲ ಹೊಂದಿರುವ ಸಣ್ಣ ಉಳಿತಾಯ ಯೋಜನೆಯಾಗಿದೆ. ಪ್ರಸ್ತುತ ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಅತ್ಯಧಿಕ ಬಡ್ಡಿದರವನ್ನು ನೀಡುತ್ತಿರುವ ಯೋಜನೆಗಳಲ್ಲಿ ಇದೂ ಒಂದು. ವಾರ್ಷಿಕವಾಗಿ ಶೇ.8.2ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಈ ಯೋಜನೆಯ ಬಡ್ಡಿದರವನ್ನು ಕೇಂದ್ರ ಸರ್ಕಾರ ಪ್ರತಿ 3 ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಬಡ್ಡಿದರ ಹೆಚ್ಚಾಗಬಹುದು, ಕಡಿಮೆಯಾಗಬಹುದು ಅಥವಾ ಅದೇ ರೀತಿಯಲ್ಲಿ ಮುಂದುವರಿಯಬಹುದು. ಆದರೆ ಬಹಳ ಕಾಲದಿಂದಲೂ ಈ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೂ ಹೆಚ್ಚಿನ ಬಡ್ಡಿ ನೀಡುವ ಆಯ್ಕೆಗಳಲ್ಲಿ ಇದು ಮುಂಚೂಣಿಯಲ್ಲಿದೆ.
ಈ ಯೋಜನೆಯ ವಿಷಯಕ್ಕೆ ಬಂದರೆ, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಹೂಡಿಕೆ ಮಾಡಲು ಅವಕಾಶವಿದೆ. ಕನಿಷ್ಠ ₹1,000ರಿಂದ ಹೂಡಿಕೆ ಆರಂಭಿಸಬಹುದು. ಗರಿಷ್ಠ ₹30 ಲಕ್ಷದವರೆಗೆ ಠೇವಣಿ ಮಾಡಬಹುದು. ಒಮ್ಮೆ ಮಾತ್ರ ಹೂಡಿಕೆ ಮಾಡಬೇಕು. ನಂತರ ಪ್ರತಿ 3 ತಿಂಗಳಿಗೊಮ್ಮೆ ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ದೊರೆಯುತ್ತದೆ. ಅಂದರೆ ನಿಯಮಿತ ಆದಾಯ ಸಿಗುತ್ತದೆ. ಮೆಚ್ಯೂರಿಟಿ ಅವಧಿ ಮುಗಿದಾಗ ಹೂಡಿಕೆ ಮಾಡಿದ ಮೂಲ ಮೊತ್ತವೂ ವಾಪಸ್ ಸಿಗುತ್ತದೆ. ಈ ಯೋಜನೆಯ ಅವಧಿ 5 ವರ್ಷಗಳಾಗಿದ್ದು, ನಂತರ 3 ವರ್ಷಗಳ ಅವಧಿಗೆ ಎಷ್ಟು ಬಾರಿ ಬೇಕಾದರೂ ವಿಸ್ತರಿಸಿಕೊಳ್ಳುವ ಅವಕಾಶವಿದೆ.
ಪ್ರತಿ 3 ತಿಂಗಳಿಗೊಮ್ಮೆ ಎಷ್ಟು ಆದಾಯ ಅಥವಾ ಬಡ್ಡಿ ಬೇಕು ಎಂಬುದಕ್ಕೆ ಅನುಗುಣವಾಗಿ ಹೂಡಿಕೆ ಮೊತ್ತವನ್ನು ಆಯ್ಕೆ ಮಾಡಬಹುದು. ಉದಾಹರಣೆಗೆ, ಈ ಯೋಜನೆಯಿಂದ ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿಯಾಗಿ ₹25 ಸಾವಿರ ಪಡೆಯಬೇಕು ಎಂದಾದರೆ ಒಂದು ಸೂತ್ರದ ಮೂಲಕ ಅಗತ್ಯವಿರುವ ಹೂಡಿಕೆಯನ್ನು ಲೆಕ್ಕ ಹಾಕಬಹುದು.
ತ್ರೈಮಾಸಿಕ ಬಡ್ಡಿ = ((ಹೂಡಿಕೆ) × 8.2% (ಬಡ್ಡಿದರ)) / 4.
ಇದರ ಮೂಲಕ ನಿಮ್ಮ ಹೂಡಿಕೆಯ ಮೇಲೆ ಪ್ರತಿ ತ್ರೈಮಾಸಿಕಕ್ಕೆ ಎಷ್ಟು ಬಡ್ಡಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಅದೇ ರೀತಿ, ನಿರ್ದಿಷ್ಟ ತ್ರೈಮಾಸಿಕ ಬಡ್ಡಿಗೆ ಎಷ್ಟು ಹೂಡಿಕೆ ಬೇಕು ಎಂಬುದನ್ನು ತಿಳಿಯಲು: ಹೂಡಿಕೆ = (ತ್ರೈಮಾಸಿಕ ಬಡ್ಡಿ × 4) / 8.2.
ಹೀಗಾಗಿ ((₹25,000 × 4) / 8.2) × 100 = ₹12,19,513 ಹೂಡಿಕೆ ಮಾಡಬೇಕಾಗುತ್ತದೆ. ಇದೇ ರೀತಿಯಲ್ಲಿ ಇತರ ಮೊತ್ತಗಳಿಗೂ ಲೆಕ್ಕ ಹಾಕಬಹುದು.
ಉದಾಹರಣೆಗೆ, ಪ್ರತಿ 3 ತಿಂಗಳಿಗೊಮ್ಮೆ ₹50 ಸಾವಿರ ಬಡ್ಡಿ ಬೇಕೆಂದರೆ ((₹50,000 × 4) / 8.2) × 100 = ಸುಮಾರು ₹24.39 ಲಕ್ಷ ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ಗರಿಷ್ಠ ಹೂಡಿಕೆ ಮಿತಿಯಾದ ₹30 ಲಕ್ಷವನ್ನು ಒಂದೇ ಬಾರಿ ಠೇವಣಿ ಮಾಡಿದರೆ, ಪ್ರತಿ ತ್ರೈಮಾಸಿಕಕ್ಕೆ ಸುಮಾರು ₹61,499 ಬಡ್ಡಿ ಪಡೆಯಬಹುದು. ಇನ್ನು ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಆರ್ಥಿಕ ವರ್ಷದಲ್ಲಿ ಗರಿಷ್ಠ ₹1.50 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

