ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಅವರ ಇತ್ತೀಚಿನ ಭರ್ಜರಿ ಫಾರ್ಮ್ ನೋಡಿ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಖಂಡಿತವಾಗಿಯೂ ಪಶ್ಚಾತ್ತಾಪ ಪಡುತ್ತಿರಬಹುದು ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಸಡಗೋಪನ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ರೋಹಿತ್ ಅವರನ್ನು ತಂಡದಿಂದ ಹೊರಗಿಡಲು ಅಗರ್ಕರ್ ಒಲವು ತೋರಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ ರಮೇಶ್ ಈ ಹೇಳಿಕೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 138 ರನ್‌ಗಳ ಸ್ಪೋಟಕ ಶತಕ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಭರ್ಜರಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ತಮ್ಮ ಮೇಲಿದ್ದ ವಿಮರ್ಶೆಗಳಿಗೆ ಬ್ಯಾಟ್ ಮೂಲಕವೇ ತಿರುಗೇಟು ನೀಡಿದ್ದಾರೆ. ಈ ಅದ್ಭುತ ಪ್ರದರ್ಶನವು ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ಮಾತನಾಡಿರುವ ಸಡಗೋಪನ್ ರಮೇಶ್, “ಮುಂದಿನ ವರ್ಷದ ವಿಶ್ವಕಪ್ ತಂಡದಲ್ಲಿ ರೋಹಿತ್ ಶರ್ಮಾ ಇರಬಾರದು ಎಂದು ಅಜಿತ್ ಅಗರ್ಕರ್ ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು. ಆದರೆ ರೋಹಿತ್ ಸತತವಾಗಿ ರನ್ ಕಾಯ್ದುಕೊಳ್ಳುತ್ತಾ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. 50 ಓವರ್ ಫೀಲ್ಡಿಂಗ್ ಮಾಡಿ ನಂತರ ಶತಕ ಬಾರಿಸುವುದು ಅವರ ಅತ್ಯುತ್ತಮ ಫಿಟ್ನೆಸ್‌ಗೆ ಸಾಕ್ಷಿ. ಅಗರ್ಕರ್ ಈಗ ತಮ್ಮ ನಿಲುವಿನ ಬಗ್ಗೆ ಖಂಡಿತ ಪಶ್ಚಾತ್ತಾಪ ಪಡುತ್ತಿರಬಹುದು” ಎಂದು ಹೇಳಿದ್ದಾರೆ.
ಇದೇ ವೇಳೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಆರೋಗ್ಯಕರ ಪೈಪೋಟಿಯನ್ನು ಮೆಚ್ಚಿಕೊಂಡ ರಮೇಶ್, “ರೋಹಿತ್ ಮತ್ತು ವಿರಾಟ್ ಪರಸ್ಪರ ಸ್ಪರ್ಧೆಗೆ ಬಿದ್ದಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಬ್ಬರು ಶತಕ ಬಾರಿಸಿದರೆ ಮತ್ತೊಬ್ಬರು ಅದನ್ನೇ ಅನುಸರಿಸುತ್ತಿದ್ದಾರೆ. ಗಾಯಗೊಂಡ ಹುಲಿಯಂತೆ ಅಬ್ಬರಿಸುತ್ತಿರುವ ರೋಹಿತ್, ಸಂಪೂರ್ಣ ಸಿಟ್ಟಿನಿಂದ ಎದುರಾಳಿ ಬೌಲರ್‌ಗಳನ್ನು ಧೂಳಿಪಟ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

