ಉತ್ತರ ಪ್ರದೇಶದ ಲಖಿಂಪುರದ 25 ವರ್ಷದ ಯುವಕನೊಬ್ಬ ಮಹಾರಾಷ್ಟ್ರದ ಬೆಲ್ಲ ತಯಾರಿಕಾ ಘಟಕದಲ್ಲಿ ಕುದಿಯುತ್ತಿದ್ದ ಬೆಲ್ಲದ ಬೃಹತ್ ಪಾತ್ರೆಗೆ ಬಿದ್ದು ಮೃತಪಟ್ಟಿದ್ದಾನೆ. ಕುಟುಂಬದ ಸಾಲ ತೀರಿಸಲು ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ ಯುವಕ ದಾರುಣವಾಗಿ ಮೃತಪಟ್ಟ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೃತನನ್ನು ಈಸಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಿ ಗ್ರಾಮದ ದಾನಿಶ್ ಎಂದು ಗುರುತಿಸಲಾಗಿದೆ. ಸುಮಾರು ನಾಲ್ಕು ತಿಂಗಳಿನಿಂದ ಮಹಾರಾಷ್ಟ್ರದ ಬೆಲ್ಲದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಾನಿಶ್, ಉದ್ಯೋಗಕ್ಕಾಗಿ ಇತರ 15 ಮಂದಿಯೊಂದಿಗೆ ಮಹಾರಾಷ್ಟ್ರಕ್ಕೆ ತೆರಳಿದ್ದನು.
ಆಗಸ್ಟ್ 21ರಂದು ಮಧ್ಯಾಹ್ನ ಸುಮಾರು 2.25ಕ್ಕೆ ಈ ದುರ್ಘಟನೆ ಸಂಭವಿಸಿದೆ. ದಾನಿಶ್ ಬೆಲ್ಲ ಕುದಿಯುತ್ತಿದ್ದ ದೊಡ್ಡ ಪಾತ್ರೆಯ ಅಂಚಿನ ಬಳಿ ನಿಂತಿದ್ದ ವೇಳೆ ಏಕಾಏಕಿ ತಲೆ ಸುತ್ತಿ ಸಮತೋಲನ ಕಳೆದುಕೊಂಡಿದ್ದಾನೆ. ಪರಿಣಾಮ ಕುದಿಯುತ್ತಿದ್ದ ಬೆಲ್ಲದ ಪಾತ್ರೆಯೊಳಗೆ ಬಿದ್ದಿದ್ದಾನೆ. ಬಳಿಕ ಸಹಾಯಕ್ಕಾಗಿ ಕೂಗಿದ್ದಾನೆ.
ಆತನ ಕೂಗು ಕೇಳಿದ ಸಹ ಕಾರ್ಮಿಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಆರಂಭದಲ್ಲಿ ಇಬ್ಬರು ಕಾರ್ಮಿಕರು ದೊಡ್ಡ ಸೌಟುಗಳ ಸಹಾಯದಿಂದ ದಾನಿಶ್‌ನನ್ನು ಹೊರಗೆಳೆಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ, ಮತ್ತಿಬ್ಬರು-ಮೂವರು ಕಾರ್ಮಿಕರು ಅಪಾಯವನ್ನೂ ಲೆಕ್ಕಿಸದೆ ಪಾತ್ರೆಯ ಬಳಿ ತೆರಳಿ ಆತನನ್ನು ಹೊರಗೆಳೆದು ರಕ್ಷಿಸಿದ್ದಾರೆ.
ಕುದಿಯುತ್ತಿದ್ದ ಬೆಲ್ಲಕ್ಕೆ ಬಿದ್ದ ಪರಿಣಾಮ ದಾನಿಶ್‌ಗೆ ತೀವ್ರ ಸುಟ್ಟ ಗಾಯಗಳಾಗಿವೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆತ ಮೃತಪಟ್ಟಿದ್ದಾನೆ. ಮಹಾರಾಷ್ಟ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಶನಿವಾರ ದಾನಿಶ್‌ನ ಮೃತದೇಹ ಸ್ವಗ್ರಾಮಕ್ಕೆ ತಲುಪಿದೆ.
ಆರಂಭದಲ್ಲಿ ದಾನಿಶ್ ಜೊತೆ ಮಹಾರಾಷ್ಟ್ರಕ್ಕೆ ತೆರಳಿದ್ದ ಕಾರ್ಮಿಕರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಗಲಾಟೆ ನಡೆಸಿದ್ದರು. ಬಳಿಕ ಪೊಲೀಸರು ಅವರಿಗೆ ಘಟನೆಯ ಸಿಸಿಟಿವಿ ದೃಶ್ಯಗಳನ್ನು ತೋರಿಸಿದ ನಂತರ ಪರಿಸ್ಥಿತಿ ಶಾಂತಗೊಂಡಿದೆ. ಈ ಘಟನೆ ಮಹಾರಾಷ್ಟ್ರದ ಬೆಲ್ಲ ತಯಾರಿಕಾ ಘಟಕದಲ್ಲಿ ನಡೆದಿದೆ ಎಂದು ಸಿಒ ಶಮ್ಶೇರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ಈವರೆಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

