ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವ ಆರೋಪಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ಬಳಿ ಕೆರೆಯಲ್ಲಿ ರೌಡಿಶೀಟರ್ ಜಯಂತ್ ಶವ ಪತ್ತೆಯಾಗಿದೆ. 22 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ರೌಡಿಶೀಟರ್ ಜಯಂತ್ ಮೃತಪಟ್ಟಿದ್ದಾನೆ. ಪೊಲೀಸರಿಂದ ಪರಾರಿಯಾಗಿದ್ದವನು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಎರಡು ದಿನಗಳ ಹಿಂದೆ ವೃದ್ಧೆಯೊಬ್ಬರ ಮಾಂಗಲ್ಯ ಸರ ಕಸಿದು ಪರಾರಿಗೆ ಯತ್ನಿಸಿದ್ದರು. ಸರ ಕಸಿದುಕೊಂಡು ಪರಾರಿಗೆ ಯತ್ನಿಸಿದ್ದ ಬ್ಯಾಟರಿ ಜಯಂತ್ ಮತ್ತು ಯತೀಶ್ ಅವರನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಸಾರ್ವಜನಿಕರು ಥಳಿಸಿದ್ದರಿಂದ ಆರೋಪಿಗಳಿಬ್ಬರು ಪ್ರಜ್ಞೆ ತಪ್ಪಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಆಂಬುಲೆನ್ಸ್ ಕರೆಸಿದ್ದರು. ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಮುಂದಾಗಿದ್ದರು. ಆಂಬುಲೆನ್ಸ್ ಚಾಲಕನನ್ನು ತಳ್ಳಿ ಜಯಂತ್ ಮತ್ತು ಯತೀಶ್ ಪರಾರಿಯಾಗಿದ್ದರು.
ನೆಲಮಂಗಲ ತಾಲೂಕಿನ ಕುಲುವನಹಳ್ಳಿಯಲ್ಲಿ ಘಟನೆ ನಡೆದಿತ್ತು. ಎಸ್ಕೇಪ್ ಆಗಿದ್ದ ರೌಡಿಶೀಟರ್ ಜಯಂತ್ ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮತ್ತೋರ್ವ ಆರೋಪಿಸಿ ಯತೀಶ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

