ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ವಯಸ್ಸನ್ನು ಮೀರಿದ ಅದ್ಭುತ ಆಟವನ್ನು ಮುಂದುವರಿಸಿದ್ದು, ಸೌದಿ ಪ್ರೋ ಲೀಗ್ ಪಂದ್ಯದಲ್ಲಿ ಕೇವಲ 15 ನಿಮಿಷಗಳ ಅಂತರದಲ್ಲಿ ಭರ್ಜರಿ ಹ್ಯಾಟ್ರಿಕ್ ಗೋಲು ಬಾರಿಸಿದ್ದಾರೆ. ರೊನಾಲ್ಡೋ ಅವರ ಈ ಆಕರ್ಷಕ ಪ್ರದರ್ಶನದ ನೆರವಿನಿಂದ ಅಲ್ ನಾಸ್ರ್ ತಂಡವು ಅಲ್ ಖೋಲೂದ್ ವಿರುದ್ಧ 5-3 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಕೇವಲ ಒಂದು ದಿನದ ಹಿಂದೆಯಷ್ಟೇ ಚೊಚ್ಚಲ ‘ಬೋಟ್’ (Ballon d’Or Of All Time – BOAT) ಪ್ರಶಸ್ತಿ ಪಡೆದಿದ್ದ ರೊನಾಲ್ಡೋ, ಮರುದಿನವೇ ಮೈದಾನದಲ್ಲಿ ಧಮಾಕಾ ಸೃಷ್ಟಿಸಿದ್ದಾರೆ.
ಪ್ರಥಮಾರ್ಧದ ಆಟ ಮುಕ್ತಾಯಗೊಂಡಾಗ ಎರಡೂ ತಂಡಗಳು 2-2 ಸಮಬಲ ಸಾಧಿಸಿ ತೀವ್ರ ಪೈಪೋಟಿ ಒಡ್ಡಿದ್ದವು. ಆರಂಭದಲ್ಲಿ ಜೂಲಿಯನ್ ಡೊಮಿಂಗುಯೆಜ್ ಗೋಲು ಬಾರಿಸಿ ಅಲ್ ಖೋಲೂದ್‌ಗೆ ಮುನ್ನಡೆ ತಂದುಕೊಟ್ಟರೂ, ಅಲ್ ನಾಸ್ರ್ ಪರ ಅಂಜೆಲೊ ಗೇಬ್ರಿಯಲ್ ಮತ್ತು ಸ್ಯಾಡಿಯೊ ಮಾನೆ ಗೋಲು ಗಳಿಸಿ ತಿರುಗೇಟು ನೀಡಿದರು. ನಂತರ ಆಂಟೊಯಿನ್ ಎಸ್ಸೊಂಬಾ ಪ್ರಥಮಾರ್ಧದ ಇಂಜುರಿ ಟೈಮ್‌ನಲ್ಲಿ ಗೋಲು ಹೊಡೆದು ಪಂದ್ಯವನ್ನು ಸಮಸ್ಥಿತಿಗೆ ತಂದರು.
ಆದರೆ ದ್ವಿತೀಯಾರ್ಧದಲ್ಲಿ ಪಂದ್ಯದ ಚಿತ್ರಣವನ್ನೇ ರೊನಾಲ್ಡೋ ಬದಲಾಯಿಸಿದರು. 67ನೇ, 72ನೇ ಮತ್ತು 81ನೇ ನಿಮಿಷಗಳಲ್ಲಿ ಸತತ ಮೂರು ಗೋಲುಗಳನ್ನು ದಾಖಲಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಪ್ರಥಮಾರ್ಧದಲ್ಲಿ ಅವರ ಎರಡು ಗೋಲುಗಳ ಪ್ರಯತ್ನಗಳು ವಿಫಲಗೊಂಡಿದ್ದರೂ, ದ್ವಿತೀಯಾರ್ಧದಲ್ಲಿ ಜೋಯಾವೋ ಫಿಲಿಕ್ಸ್ ಮತ್ತು ಸ್ಯಾಡಿಯೊ ಮಾನೆ ನೀ ನೀಡಿದ ಅದ್ಭುತ ಪಾಸ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ರೊನಾಲ್ಡೋ ಯಶಸ್ವಿಯಾದರು.
ಪಂದ್ಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡ ರೊನಾಲ್ಡೋ, ತಂಡದ ಸಹ ಆಟಗಾರರ ಶ್ರಮವನ್ನು ಶ್ಲಾಘಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಒಟ್ಟು 1,000 ಗೋಲುಗಳ ಐತಿಹಾಸಿಕ ಮೈಲಿಗಲ್ಲು ತಲುಪುವತ್ತ ಹೆಜ್ಜೆ ಇಡುತ್ತಿರುವ ರೊನಾಲ್ಡೋ ಅವರ ಈ ಪ್ರದರ್ಶನ ಅಭಿಮಾನಿಗಳಿಗೆ ಅಪಾರ ಸಂತಸ ತಂದಿದೆ.

