ನವದೆಹಲಿ: 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಣರಾಜ್ಯೋತ್ಸವ ದಿನಾಚರಣೆಯಂದು ಪೊಲೀಸ್ ಸಿಬ್ಬಂದಿಗೆ ನೀಡುವ ಶೌರ್ಯ ಮತ್ತು ಸೇವಾ ಪದಕಗಳಿಗೆ ಈ ಬಾರಿ 982 ಸಿಬ್ಬಂದಿಗಳು ಆಯ್ಕೆಯಾಗಿದ್ದಾರೆ.
ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವೆಗಳಿಗಾಗಿ 982 ಸಿಬ್ಬಂದಿಯನ್ನು ಶೌರ್ಯ ಮತ್ತು ಸೇವಾ ಪದಕಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ
982 ಪದಕಗಳಲ್ಲಿ 125 ಶೌರ್ಯ ಪದಕಗಳು ಸೇರಿವೆ. ಮುಖ್ಯವಾಗಿ ಜಮ್ಮು ಕಾಶ್ಮೀರದ ನಕ್ಸಲ್ ಪೀಡಿತ ಹಿಂಸಾಚಾರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ 35, ಶಸ್ತ್ರಾಸ್ತ್ರ ಕಾರ್ಯಾಚರಣೆಯಲ್ಲಿ ನಿಯೋಜಿಸಲಾದ 45 ಹಾಗೂ ಈಶಾನ್ಯ ಪ್ರದೇಶದಲ್ಲಿ ನಿಯೋಜಿಸಲಾದ ಐವರು ಸಿಬ್ಬಂದಿ ಶೌರ್ಯ ಪದಕಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ನಾಲ್ವರು ಅಗ್ನಿಶಾಮಕ ಸಿಬ್ಬಂದಿ ಕೂಡ ಶೌರ್ಯ ಪದಕಕ್ಕೆ ಭಾಜನರಾಗಿದ್ದಾರೆ.
ಈ ಬಾರಿ ಶೌರ್ಯ ಮತ್ತು ಸೇವಾ ಪದಕಗಳಿಗೆ ಆಯ್ಕೆಯಾದವರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅತಿಹೆಚ್ಚು (33) ಶೌರ್ಯ ಪದಕಗಳನ್ನ ಪಡೆದುಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ಮಹಾರಾಷ್ಟ್ರ ಪೊಲೀಸರು (31) ಇದ್ದಾರೆ. ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶ ಪೊಲೀಸ್ (18), ನಾಲ್ಕನೇ ಸ್ಥಾನದಲ್ಲಿ ದೆಹಲಿ ಪೊಲೀಸ್ (14) ಇದ್ದಾರೆ. ಇನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) 12 ಪದಕ ಶೌರ್ಯ ಪ್ರಶಸ್ತಿಗಳನ್ನು ಪಡೆದ ಏಕೈಕ ಪಡೆ CRPF ಆಗಿದೆ.
ಈ ಬಾರಿ ಘೋಷಣೆ ಮಾಡಲಾದ ಪಟ್ಟಿಯಲ್ಲಿ ಒಟ್ಟು 101 ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (PSM) ಹಾಗೂ 756 ವಿಶಿಷ್ಟ ಸೇವಾ ಪದಕ (MSM) ಸಹ ಸೇರಿವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

