ಚಂಡೀಗಢ: ಪಂಜಾಬ್ ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ(ಎಎಪಿ) ಹಿನ್ನಡೆಯಾಗಿದ್ದು, ಪಕ್ಷದ ಇಬ್ಬರು ಶಾಸಕರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹರಮೀತ್ ಸಿಂಗ್ ಪಠಾಣ್ಮಜ್ರಾ ಮತ್ತು ಚೇತನ್ ಸಿಂಗ್ ಜೋರಾಮಜ್ರಾ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಪಟಿಯಾಲ ಜಿಲ್ಲೆಯ ಸನೌರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಹರಮೀತ್ ಸಿಂಗ್ ಪಠಾಣ್ ಮಜ್ರಾ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಿಂದೆ ಸರಿಯುತ್ತಿರುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಸಮಾನಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಪಂಜಾಬ್ ನ ಮಾಜಿ ಸಚಿವ ಚೇತನ್ ಸಿಂಗ್ ಜೋರಾಮಜ್ರಾ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಅವರು, ಎಎಪಿಯ ಪ್ರಾಥಮಿಕ ಸದಸ್ಯತ್ವ ತ್ಯಜಿಸಿರುವುದಾಗಿ ತಿಳಿಸಿದ್ದಾರೆ.
ಚುನಾವಣೆಗೂ ಮುನ್ನ ರಾಜಕೀಯ ಬೆಳವಣಿಗೆ
ಪಂಜಾಬ್ ನಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಬ್ಬರು ಶಾಸಕರು ಪಕ್ಷ ತೊರೆದಿರುವುದು ಎಎಪಿಗೆ ರಾಜಕೀಯ ಸವಾಲಾಗಿ ಪರಿಣಮಿಸಿದೆ. ಒಂದೇ ಸಂದರ್ಭದಲ್ಲಿ ಇಬ್ಬರು ಶಾಸಕರು ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಆದರೆ, ಇಬ್ಬರೂ ಶಾಸಕರು ಪಕ್ಷ ತೊರೆಯಲು ಕಾರಣವೇನು ಎಂಬ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಅವರ ಮುಂದಿನ ರಾಜಕೀಯ ನಡೆ ಹಾಗೂ ಬೇರೆ ಪಕ್ಷ ಸೇರುವ ಸಾಧ್ಯತೆಗಳ ಬಗ್ಗೆಯೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಈ ರಾಜೀನಾಮೆಗಳಿಂದ ಪಂಜಾಬ್ನ ರಾಜಕೀಯ ಸಮೀಕರಣಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.
ಇಬ್ಬರು ಶಾಸಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಶಾಸಕ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ.
ಎಎಪಿ ಶಾಸಕರ ಅಸಮಾಧಾನ ಮತ್ತು ಪಕ್ಷದ ಆಂತರಿಕ ಭಿನ್ನಮತ
ಪಂಜಾಬ್ನಲ್ಲಿ 2027ರ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಎಎಪಿ ಈಗಾಗಲೇ ಚುನಾವಣಾ ಸಿದ್ಧತೆ ಆರಂಭಿಸಿದ್ದು, ಅಕ್ಟೋಬರ್ 31ರಂದು 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಹಾಲಿ 40 ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಇಬ್ಬರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ.
2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ಬೆನ್ನಲ್ಲೇ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಹಿನ್ನಡೆಯಾಗಿದೆ. ಪಕ್ಷದ ಶಾಸಕರಾದ ಹರಮೀತ್ ಸಿಂಗ್ ಪಠಾಣ್ಮಾಜ್ರಾ ಮತ್ತು ಚೇತನ್ ಸಿಂಗ್ ಜೌರಮಾಜ್ರಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರೂ ಶಾಸಕರು ಪಕ್ಷದ ಸದಸ್ಯತ್ವ ತ್ಯಜಿಸಿರುವುದು ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಪಠಾಣ್ ಮಾಜ್ರಾ ವಿರುದ್ಧ ಪ್ರಕರಣಗಳು
ಹರಮೀತ್ ಸಿಂಗ್ ಪಠಾಣ್ ಮಾಜ್ರಾ ಅವರು ಈ ಹಿಂದೆ ಪಕ್ಷದ ನಾಯಕತ್ವ ಮತ್ತು ಸರ್ಕಾರದ ಕಾರ್ಯವೈಖರಿ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ಅಧಿಕಾರಿಗಳ ಕಾರ್ಯನಿರ್ವಹಣೆ ಕುರಿತು ಅವರು ಪಕ್ಷದ ವಿರುದ್ಧ ಟೀಕೆ ಮಾಡಿದ್ದರು. 2027ರ ಚುನಾವಣೆಯಲ್ಲಿ ಸನೌರ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದ ಅವರು, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದನ್ನು ಕ್ಷೇತ್ರದ ಜನರ ಅಭಿಪ್ರಾಯ ಪಡೆದು ನಿರ್ಧರಿಸುವುದಾಗಿ ಈ ಹಿಂದೆ ತಿಳಿಸಿದ್ದರು.
ಇದಲ್ಲದೆ, ಅವರ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ ಅವರಿಗೆ 2026ರ ಮೇ ತಿಂಗಳಲ್ಲಿ ಜಾಮೀನು ದೊರೆತಿತ್ತು. ಜೂನ್ ನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದ ಅವರು, ಎಎಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳ ಆಯ್ಕೆಯೂ ಮುಕ್ತವಾಗಿದೆ ಎಂದು ಹೇಳಿದ್ದರು.
ಚುನಾವಣೆಗೆ ಮುನ್ನ ಪಕ್ಷದೊಳಗಿನ ಬೆಳವಣಿಗೆ
ಪಂಜಾಬ್ನಲ್ಲಿ ಎಎಪಿ ಶಾಸಕರ ನಡುವಿನ ಅಸಮಾಧಾನ ಮತ್ತು ಪಕ್ಷದ ಆಂತರಿಕ ಭಿನ್ನಮತಗಳು ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿವೆ. ಕೆಲವು ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿರುವುದು, ಮತ್ತೆ ಕೆಲವರಿಗೆ ಕ್ಷೇತ್ರದ ಜವಾಬ್ದಾರಿಯಿಂದ ಬದಲಾವಣೆ ಮಾಡಿರುವುದು ಕಾರಣವೆನ್ನಲಾಗಿದೆ.
ಇದೀಗ ಇಬ್ಬರು ಶಾಸಕರು ರಾಜೀನಾಮೆ ನೀಡಿರುವ ಬೆಳವಣಿಗೆ ಪಕ್ಷದ ಮುಂದಿನ ಚುನಾವಣಾ ಕಾರ್ಯತಂತ್ರದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ. ಇಬ್ಬರೂ ಶಾಸಕರು ಮುಂದಿನ ದಿನಗಳಲ್ಲಿ ಯಾವ ರಾಜಕೀಯ ನಿಲುವು ತೆಗೆದುಕೊಳ್ಳಲಿದ್ದಾರೆ ಮತ್ತು ಬೇರೆ ಪಕ್ಷ ಸೇರುತ್ತಾರೆಯೇ ಎಂಬುದರ ಬಗ್ಗೆ ಅಧಿಕೃತ ಸ್ಪಷ್ಟನೆಗಾಗಿ ಕಾಯಬೇಕಿದೆ.

