HomeBusinessಹೈ-ರೆಂಟ್ ಬಾಡಿಗೆದಾರರೇ ಎಚ್ಚರ ಟಿಡಿಎಸ್ ಕಡಿತದಲ್ಲಿ ನಿರ್ಲಕ್ಷ್ಯ ತೋರಿದರೆ ಐಟಿ ಇಲಾಖೆಯಿಂದ ನೋಟಿಸ್ ಗ್ಯಾರಂಟಿ

ಹೈ-ರೆಂಟ್ ಬಾಡಿಗೆದಾರರೇ ಎಚ್ಚರ ಟಿಡಿಎಸ್ ಕಡಿತದಲ್ಲಿ ನಿರ್ಲಕ್ಷ್ಯ ತೋರಿದರೆ ಐಟಿ ಇಲಾಖೆಯಿಂದ ನೋಟಿಸ್ ಗ್ಯಾರಂಟಿ

ನೀವು ವಾಸವಿರುವ ಮನೆ ಅಥವಾ ಕಚೇರಿಗೆ ಪ್ರತಿ ತಿಂಗಳು 50,000 ರೂಪಾಯಿಗಿಂತ ಹೆಚ್ಚು ಬಾಡಿಗೆ ಪಾವತಿಸುತ್ತಿದ್ದರೆ, ಆದಾಯ ತೆರಿಗೆ ಇಲಾಖೆಯ ಒಂದು ಪ್ರಮುಖ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 194-IB ಅಡಿಯಲ್ಲಿ, ಇಷ್ಟು ಮೊತ್ತದ ಬಾಡಿಗೆ ನೀಡುವ ವ್ಯಕ್ತಿಗಳು ಅಥವಾ ಅವಿಭಜಿತ ಹಿಂದೂ ಕುಟುಂಬಗಳು (HUF), ಮಾಲೀಕರಿಗೆ ಬಾಡಿಗೆ ನೀಡುವಾಗ ಮೂಲದಲ್ಲೇ ತೆರಿಗೆ ಕಡಿತ (TDS) ಮಾಡಬೇಕಾಗುತ್ತದೆ. ಈ ನಿಯಮವು ವರ್ಷದ ಯಾವುದೇ ಒಂದು ತಿಂಗಳು ಬಾಡಿಗೆ ಮೊತ್ತ 50 ಸಾವಿರ ದಾಟಿದರೂ ಅನ್ವಯವಾಗುತ್ತದೆ.

ಈ ನಿಯಮ ಏಕೆ ಜಾರಿಗೆ ಬಂದಿತು? ಅನೇಕ ಬಾಡಿಗೆದಾರರು ತಮಗೆ ಸಿಗುವ ಮನೆ ಬಾಡಿಗೆ ಭತ್ಯೆ (HRA) ವಿನಾಯಿತಿಯನ್ನು ಪಡೆಯುತ್ತಿದ್ದರು, ಆದರೆ ಮನೆ ಮಾಲೀಕರು ಆ ಬಾಡಿಗೆ ಆದಾಯವನ್ನು ತಮ್ಮ ತೆರಿಗೆ ರಿಟರ್ನ್ಸ್‌ನಲ್ಲಿ ತೋರಿಸುತ್ತಿರಲಿಲ್ಲ. ಈ ವ್ಯತ್ಯಾಸವನ್ನು ಸರಿಪಡಿಸಲು ಮತ್ತು ಬಾಡಿಗೆ ವ್ಯವಹಾರದಲ್ಲಿ ಪಾರದರ್ಶಕತೆ ತರಲು ಸರ್ಕಾರ 2017ರಲ್ಲಿ ಈ ನಿಯಮವನ್ನು ಜಾರಿಗೆ ತಂದಿತು.

ಟಿಡಿಎಸ್ (TDS) ದರದಲ್ಲಿ ಬದಲಾವಣೆ ಹಿಂದೆ ಈ ನಿಯಮದ ಅಡಿಯಲ್ಲಿ ಶೇಕಡಾ 5 ರಷ್ಟು ಟಿಡಿಎಸ್ ಕಡಿತಗೊಳಿಸಬೇಕಿತ್ತು. ಆದರೆ 2024ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರ ಈ ದರವನ್ನು ಕಡಿತಗೊಳಿಸಿದೆ. ಅಕ್ಟೋಬರ್ 1, 2024 ರಿಂದ ಜಾರಿಗೆ ಬರುವಂತೆ, ಈಗ ಬಾಡಿಗೆದಾರರು ಕೇವಲ ಶೇಕಡಾ 2 ರಷ್ಟು ಟಿಡಿಎಸ್ ಕಡಿತಗೊಳಿಸಿದರೆ ಸಾಕು. ಒಂದು ವೇಳೆ ಮನೆ ಮಾಲೀಕರು ತಮ್ಮ ಪ್ಯಾನ್ (PAN) ಕಾರ್ಡ್ ವಿವರ ನೀಡದಿದ್ದರೆ, ಈ ಕಡಿತವು ಶೇಕಡಾ 20 ಕ್ಕೆ ಏರಿಕೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಿಡಿಎಸ್ ಪಾವತಿ ಮಾಡುವುದು ಹೇಗೆ? ಬಾಡಿಗೆದಾರರು ಪ್ರತಿ ತಿಂಗಳು ಟಿಡಿಎಸ್ ಕಡಿತಗೊಳಿಸುವ ಅಗತ್ಯವಿಲ್ಲ. ಹಣಕಾಸು ವರ್ಷದ ಕೊನೆಯ ತಿಂಗಳು ಅಂದರೆ ಮಾರ್ಚ್‌ನಲ್ಲಿ ಅಥವಾ ಬಾಡಿಗೆದಾರರು ಮನೆ ಖಾಲಿ ಮಾಡುವ ಕೊನೆಯ ತಿಂಗಳಲ್ಲಿ ಈ ಮೊತ್ತವನ್ನು ಕಡಿತಗೊಳಿಸಿ ಸರ್ಕಾರಕ್ಕೆ ಜಮಾ ಮಾಡಬೇಕು. ಉದಾಹರಣೆಗೆ, ಮಾರ್ಚ್ 2026ರಲ್ಲಿ ಕಡಿತಗೊಳಿಸಿದ ಟಿಡಿಎಸ್ ಅನ್ನು ಏಪ್ರಿಲ್ 30, 2026 ರೊಳಗೆ ಪಾವತಿಸಬೇಕು. ಇದಕ್ಕಾಗಿ ಬಾಡಿಗೆದಾರರು ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನಲ್ಲಿ ‘ಫಾರ್ಮ್ 26QC’ ಬಳಸಬಹುದು. ಇದಕ್ಕೆ ಪ್ರತ್ಯೇಕವಾಗಿ ಟ್ಯಾನ್ (TAN) ಸಂಖ್ಯೆಯ ಅಗತ್ಯವಿರುವುದಿಲ್ಲ.

ನಿಯಮ ಉಲ್ಲಂಘಿಸಿದರೆ ಭಾರಿ ದಂಡ! ಈ ನಿಯಮವನ್ನು ಪಾಲಿಸದಿದ್ದರೆ ಬಾಡಿಗೆದಾರರು ಸಂಕಷ್ಟಕ್ಕೆ ಸಿಲುಕಬಹುದು. ಟಿಡಿಎಸ್ ಕಡಿತಗೊಳಿಸದಿದ್ದರೆ ಪ್ರತಿ ತಿಂಗಳಿಗೆ ಶೇಕಡಾ 1 ರಷ್ಟು ಮತ್ತು ಪಾವತಿ ವಿಳಂಬ ಮಾಡಿದರೆ ಶೇಕಡಾ 1.5 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಜೊತೆಗೆ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ವಿಳಂಬವಾದರೆ ದಿನಕ್ಕೆ 200 ರೂಪಾಯಿ ದಂಡ ಮತ್ತು ಸೆಕ್ಷನ್ 271H ಅಡಿಯಲ್ಲಿ 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶವಿದೆ. ಆದ್ದರಿಂದ ಹೆಚ್ಚಿನ ಬಾಡಿಗೆ ಪಾವತಿಸುವವರು ಈ ಬಗ್ಗೆ ಜಾಗರೂಕರಾಗಿರುವುದು ಅವಶ್ಯಕ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular