ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಜ್ವಾಲೆ ಜಾಗತಿಕ ಇಂಧನ ಮಾರುಕಟ್ಟೆಯನ್ನು ದಹಿಸುತ್ತಿದೆ. ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಇರಾನ್ ಬೆದರಿಕೆಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‘ಗೆ 100 ಡಾಲರ್ ಗಡಿ ದಾಟಿದ್ದು, ಮೂರೂವರೆ ವರ್ಷಗಳ ದಾಖಲೆಯನ್ನು ಮುರಿದಿದೆ.
ಹೌದು. ದಿಢೀರ್ ಏರಿಕೆಯು ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವ ಆತಂಕ ಮೂಡಿಸಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಶೀಘ್ರದಲ್ಲೇ ಗಗನಕ್ಕೇರುವ ಮುನ್ಸೂಚನೆ ನೀಡಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಜ್ವಾಲೆ ಇದೀಗ ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ಕೂಟದ ನಡುವಿನ ಸಂಘರ್ಷ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ. ಭಾನುವಾರ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 100 ಡಾಲರ್ ಗಡಿ ದಾಟುವ ಮೂಲಕ ಕಳೆದ ಮೂರೂವರೆ ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ.
ದಾಖಲೆ ಮಟ್ಟದಲ್ಲಿ ಏರಿಕೆಯಾದ ದರಗಳು: ಶುಕ್ರವಾರದವರೆಗೆ ಮಾರುಕಟ್ಟೆಯಲ್ಲಿ ಬೆಲೆಗಳು ಸ್ಥಿರವಾಗಿದ್ದವು. ಆದರೆ ಭಾನುವಾರ ಒಂದೇ ದಿನದಲ್ಲಿ ಬೆಲೆ ತಲೆಕೆಳಗಾಗಿದೆ.
WTI (ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್): ಅಮೆರಿಕದ ಬೆಂಚ್ಮಾರ್ಕ್ ತೈಲ ದರ ಶೇ. 16.9 ರಷ್ಟು ಏರಿಕೆಯಾಗಿ 106.22 ಡಾಲರ್ಗೆ ತಲುಪಿದೆ.ಅಂತರಾಷ್ಟ್ರೀಯ ಬೆಂಚ್ಮಾರ್ಕ್ ತೈಲ ದರ ಶೇ. 16.5 ರಷ್ಟು ಏರಿಕೆಯಾಗಿ 107.97 ಡಾಲರ್ಗೆ ಏರಿದೆ. ಕಳೆದ ಒಂದು ವಾರದಲ್ಲಿ ಅಮೆರಿಕದ ಕ್ರೂಡ್ ಬೆಲೆ ಶೇ. 36 ರಷ್ಟು ಏರಿಕೆಯಾಗಿರುವುದು ಗಮನಾರ್ಹ.
ಹಾರ್ಮುಜ್ ಜಲಸಂಧಿಯ ದಿಗ್ಬಂಧನ – ಅಸಲಿ ಆತಂಕ: ವಿಶ್ವದ ಒಟ್ಟು ತೈಲ ಪೂರೈಕೆಯ ಶೇ. 20ರಷ್ಟು ಭಾಗ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚುವುದಾಗಿ ಇರಾನ್ ಬೆದರಿಕೆ ಹಾಕಿದೆ. ಒಂದು ವೇಳೆ ಈ ಮಾರ್ಗದ ಮೂಲಕ ನೌಕೆಗಳನ್ನು ನಡೆಸಲು ಪ್ರಯತ್ನಿಸಿದರೆ ಅವುಗಳನ್ನು ಸುಟ್ಟು ಹಾಕುವುದಾಗಿ ಇರಾನ್ ಎಚ್ಚರಿಸಿದೆ. ಫೆಬ್ರವರಿ 28ರಂದು ಇರಾನ್ ಮೇಲೆ ನಡೆದ ದಾಳಿಯ ನಂತರ ಈ ಬೆಳವಣಿಗೆ ಸಂಭವಿಸಿದೆ.
ಜಾಗತಿಕ ಮತ್ತು ಭಾರತದ ಮೇಲೆ ಪರಿಣಾಮ: ಯುದ್ಧ ಹೀಗೆಯೇ ಮುಂದುವರಿದರೆ ತೈಲ ಬೆಲೆ ಬ್ಯಾರೆಲ್ಗೆ 120 ರಿಂದ 150 ಡಾಲರ್ವರೆಗೆ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ಭಾರತದಂತಹ ಆಮದು ಅವಲಂಬಿತ ದೇಶಗಳಲ್ಲಿ ಹಣದುಬ್ಬರವನ್ನು ಹೆಚ್ಚಿಸಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಮೂಲಕ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ಭೀತಿ ಮೂಡಿಸಿದೆ.

