ಬೆಂಗಳೂರು: ತೆಲುಗು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಹಿರಿಯ ಹಿನ್ನೆಲೆ ಗಾಯಕಿ ಕೆ. ಜಮುನಾ ರಾಣಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. 88 ವರ್ಷದ ಅವರು ಐದು ಭಾಷೆಗಳಲ್ಲಿ 6 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗುವ ಮೂಲಕ ಸಂಗೀತ ಲೋಕದಲ್ಲಿ ಅಳಿಯದ ಛಾಪು ಮೂಡಿಸಿದ್ದರು. ಅವರ ನಿಧನದಿಂದ ಚಿತ್ರರಂಗ ಹಾಗೂ ಸಂಗೀತಾಭಿಮಾನಿಗಳಲ್ಲಿ ತೀವ್ರ ಶೋಕ ಮನೆ ಮಾಡಿದೆ.
ಆಂಧ್ರಪ್ರದೇಶದಲ್ಲಿ ಜನಿಸಿದ ಜಮುನಾ ರಾಣಿ ಅವರು 1946ರಲ್ಲಿ ಬಿಡುಗಡೆಯಾದ ‘ತ್ಯಾಗಯ್ಯ’ ಚಿತ್ರದಲ್ಲಿ ಬಾಲ ಕಲಾವಿದರಿಗಾಗಿ ಹಾಡುವ ಮೂಲಕ ಗಾಯನ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.
‘ಎಂತ ಟಕ್ಕರಿ ವಾಡು ನಾರಾಜು’, ‘ಸರದಾ ಸರದಾ ಸಿಗರೇಟ್ಟು’, ‘ಮುಕ್ಕುಮೀದ ಕೋಪಂ.. ನೀ ಮುಖಾನಿಕೆ ಅಂದಂ’ ಸೇರಿದಂತೆ ಅನೇಕ ಜನಪ್ರಿಯ ಹಾಡುಗಳಿಗೆ ಧ್ವನಿಯಾಗಿದ್ದ ಅವರು, ಐದು ಭಾಷೆಗಳಲ್ಲಿ 6,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಅಪಾರ ಜನಪ್ರಿಯತೆ ಗಳಿಸಿದ್ದರು.
ತಮಿಳುನಾಡು ಸರ್ಕಾರವು ಜಮುನಾ ರಾಣಿ ಅವರಿಗೆ ಅಣ್ಣಾದುರೈ ಪ್ರಶಸ್ತಿ ಹಾಗೂ ಕಲೈಮಾಮಣಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಜಮುನಾ ರಾಣಿ ಅವರ ನಿಧನಕ್ಕೆ ಟಾಲಿವುಡ್ನ ಹಲವು ಗಣ್ಯರು ಹಾಗೂ ಸಿನಿ ಕಲಾವಿದರು ಸಂತಾಪ ಸೂಚಿಸಿದ್ದಾರೆ.

